ಬಸ್ ನಿಲ್ದಾಣದಲ್ಲಿ ತನ್ನ ದಾರಿಯ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಓರ್ವ ವ್ಯಕ್ತಿಗೆ ಅಲ್ಲೇ ಬಿದ್ದಿರುವ ಪೇಪರ್, ಪ್ಲಾಸ್ಟಿಕ್ ತರಹದ ಒಂದಿಷ್ಟು ಕಸವನ್ನು ಪಕ್ಕದಲ್ಲಿನ ಕಸದ ಬುಟ್ಟಿಗೆ ಹಾಕಿ ತಾನೂ “ಸ್ವಚ್ಛ ಭಾರತ”ದಲ್ಲಿ ತೊಡಗಬೇಕೆನ್ನುವ ಆಸಕ್ತಿ ಒಂದೆಡೆಯಾದರೆ .., ಅದನ್ನೇನಾದರೂ ಮಾಡಿದರೆ ತನ್ನ ಸುತ್ತಮುತ್ತ ನಿಂತಿರುವ ಜನ ಏನಂದುಕೊಳ್ಳುತ್ತಾರೋ ಅನ್ನುವ ಮುಜುಗರ ಇನ್ನೊಂದೆಡೆ… “ಕೃಷಿ ನಮಗೆ ಪಾರಂಪರಿಕವಾಗಿ ಬಂದ ಕಸುಬು, ಅದೇ ನನ್ನನ್ನು ವಿದ್ಯಾವಂತನನ್ನಾಗಿ ಮಾಡಿದೆ, ಪದವಿ ಶಿಕ್ಷಣ ಮುಗಿದ ನಂತರ ದೂರದ ನಗರ ಸಂಚರಿಸುವ ಬದಲು ಹಳ್ಳಿಯಲ್ಲೇ ಇದ್ದು ರೈತನಾಗುತ್ತೇನೆ” ಎನ್ನುವ ಅಪರೂಪದ ಆಲೋಚನೆ ಓರ್ವ ಯುವಕನಿಗೆ ಒಂದೆಡೆಯಾದರೆ.., ತಾನೊಬ್ಬ ಹಳ್ಳಿಯಲ್ಲೇ ಉಳಿದು ವ್ಯವಸಾಯವನ್ನು ಪ್ರಾರಂಭಿಸಿದರೆ ತನ್ನ ಕಾಲೇಜು ಸ್ನೇಹಿತರೆಲ್ಲ ಏನಂದುಕೊಳ್ಳುತ್ತಾರೋ ಎನ್ನುವ ಅಂಜಿಕೆ ಇನ್ನೊಂದೆಡೆ…
ಬಹುಶಃ ಮೇಲ್ಕಂಡ ಈ ಎರಡು ಸನ್ನಿವೇಶಗಳು ಸಾಕಾಗಬಹುದು ನಮ್ಮ ದೇಶದಲ್ಲಿನ ವಿವಿಧ ರೀತಿಯ ಉದ್ಯೋಗ ಹಾಗೂ ಕಾರ್ಮಿಕರ ಘನತೆಯಲ್ಲಿರುವ ತಾರತಮ್ಯವನ್ನು ಚಿತ್ರಿಸಲು..! ಅಲ್ಲಿ ಆತ ತನ್ನ ದಾರಿಯ ಬಸ್ ಹತ್ತಿ ಮನೆ ಸೇರಿದನಾದರೂ ಆತನ ಪಕ್ಕದಲ್ಲಿದ್ದ ಕಸ ಮಾತ್ರ ಕಸದ ಬುಟ್ಟಿ ಸೇರಲಿಲ್ಲ. ಇತ್ತ ಹಳ್ಳಿಯಲ್ಲಿದ್ದ ಜಮೀನಿನ ಕೃಷಿ ಚಟುವಟಿಕೆಗಳಿಂದ ದೂರ ಉಳಿದ ಇನ್ನೋರ್ವ ಯುವಕ ನಗರ ಸೇರಿದ. ತನಗಾಗುವ ಮುಜುಗರವನ್ನು ತಪ್ಪಿಸಲು ಹಾಗೂ ತನ್ನ ಘನತೆಯನ್ನು ಸಮಾಜದ ಮುಂದೆ ಕಾಪಾಡಿಕೊಳ್ಳುವ ಸಲುವಾಗಿ ಇಷ್ಟವಿದ್ದರೂ ದೇಶದ ಅಭಿವೃದ್ಧಿಗೆ ಪೂರಕವಾದ ಆ ಎರಡು ಯೋಚನೆಗಳನ್ನು ಪೂರೈಸುವುದು ಕಷ್ಟವಾಯಿತು. ತನ್ನ ಸುತ್ತಲಿನ ಜನ ಗಮನಿಸುವ ಹಾಗೂ ಆಲೋಚಿಸುವ ಶೈಲಿಯೇ ಇಲ್ಲಿ ಕಂಟಕವಾಯಿತು. ಇಲ್ಲಿ ಕಾಡುವ ಪ್ರಶ್ನೆಯೇನೆಂದರೆ, ಸಮಾಜಮುಖಿ ಚಿಂತನೆಗಳಿಗೆ ಆ ಸಮಾಜದಿಂದಲೇ ಗೌರವ, ಮಾನ್ಯತೆ ಸಿಗುತ್ತಿಲ್ಲವೇ ಎಂಬುದು. ಹೌದು… ಇದು ಕೇವಲ ಉದಾಹರಣೆಯಷ್ಟೆ. ಆದರೆ ಸಮಾಜದಲ್ಲಿ ಬೇರೂರಿರುವ ಇಂತಹ ಮನಸ್ಥಿತಿಯೇ ದೇಶದ ಪ್ರಗತಿಗೆ ಪ್ರಮುಖ ತಡೆಯಾಗಿದೆ ಎಂಬುದಂತೂ ನಂಬಲೇಬೇಕಾದ ಸತ್ಯ.
“ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ,
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು,
ಜಂಗಮವಾದರೂ ಕಾಯಕದಿಂದಲೇ ವೇಷದ ಪಾಶ ಹರಿವುದು…”
ಕಾಯಕ ಪ್ರತಿಯೊಬ್ಬನ ಅವಶ್ಯಕತೆ. ಯಾವುದೇ ಕೆಲಸ ಕೀಳಲ್ಲ, ಯಾವುದೂ ಮೇಲಲ್ಲ. ಓರ್ವ ವ್ಯಕ್ತಿ ಮಾಡುವ ಕಾಯಕವು ಆತನ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಆದರೆ ಆ ಕಾಯಕದಲ್ಲಿರುವ ನಿಷ್ಠೆಯು ವ್ಯಕ್ತಿತ್ವದ ನಿರ್ಧಾರಕ. ದುಡಿಮೆಯೆಂಬುದು ಪ್ರತಿಯೊಬ್ಬನ ಬದುಕಿನ ಧರ್ಮವಾಗಬೇಕು. ಆ ಧರ್ಮಪಾಲನೆಯಲ್ಲೇ ವ್ಯಕ್ತಿಯ ಘನತೆ ನಿರ್ಧಾರವಾಗುವುದೇ ಹೊರತು ಆತ ಮಾಡುವ ಕಾಯಕದ ನಮೂನೆಯಿಂದಲ್ಲ. ಈ ರೀತಿ ಸಮಾಜದಲ್ಲಿನ ಜನತೆ ಸಮದೃಷ್ಟಿಯನ್ನು ಬೆಳೆಸಿಕೊಂಡು ಸರ್ವಸಮಾನತೆಯ ನೆಲೆಯಲ್ಲಿ ಸಹಬಾಳ್ವೆಯ ಸಮಾಜವನ್ನು ಕಟ್ಟಬೇಕೆನ್ನುವುದು ಬಸವಣ್ಣನವರ ನಿಲುವಾಗಿತ್ತು. ಇದು ಸಾರ್ವಕಾಲಿಕವಾಗಿ ಅನ್ವಯಿಸುವ ಚಿಂತನೆಯೂ ಹೌದು. ಆದರೆ ಪ್ರಸ್ತುತ ಸಮಾಜದಲ್ಲಿ ಈ ಸಮದೃಷ್ಟಿಯ ನಿಲುವು ಎಷ್ಟರ ಮಟ್ಟಿಗೆ ಇದೆ ಎಂಬ ವಿಚಾರವೇ ಇಲ್ಲಿ ಶೋಚನೀಯ.
“ಒಂದು ಕಾಲದಲ್ಲಿ ತೋಟದ ಕೆಲಸಕ್ಕೆ ಜನ ತಾವಾಗಿಯೇ ಮನೆಬಾಗಿಲಿಗೆ ಬರುತ್ತಿದ್ದರು, ಸುಲಭವಾಗಿ ಸಿಗುತ್ತಿದ್ದರು. ಈಗ ಊರೆಲ್ಲಾ ಹುಡುಕಿದರೂ, ಅದೆಷ್ಟೋ ಸಂಬಳ ಕೊಡುವುದಾಗಿ ಒತ್ತಾಯಿಸಿದರೂ ಒಂದು ಆಳು ಕೂಡ ಸಿಗುತ್ತಿಲ್ಲ..” ಇದು ಹಳ್ಳಿಯ ಕಡೆ ಕೃಷಿಕರು ಒಂದೆಡೆ ಸೇರಿದಾಗ ಪ್ರತಿಧ್ವನಿಸಿ ಬರುವ ಪ್ರಧಾನ ಸಂಭಾಷಣೆ. ಈ ಪರಿಸ್ಥಿತಿ ಹೇಗೆ ನಿರ್ಮಾಣವಾಯಿತು ಎನ್ನುವುದೇ ಆ ಹರಟೆಯ ಪ್ರಮುಖ ಚರ್ಚಾವಸ್ತು. “ನೀವೆಲ್ಲಾ ಇನ್ನೂ ಯುವಕರು, ದುಡಿಯೋದಕ್ಕೆ ನಿಮ್ಮಲ್ಲಿ ಶಕ್ತಿ – ಸಾಮರ್ಥ್ಯವಿದೆ. ಆದರೆ ಅದನ್ನು ಉಪಯೋಗಿಸುವ ಹುಮ್ಮಸ್ಸು ಮಾತ್ರ ನಿಮಗಿಲ್ಲ. ನಿಮ್ಮಂತಹ ಯುವಕರು ಬೆಂಗಳೂರಿನಲ್ಲಿ ನೆಲೆನಿಂತ ಪರಿಣಾಮವನ್ನು ಈ ತೋಟ ಅನುಭವಿಸುತ್ತಿದೆ..” ಎಂಬುದು ತನ್ನಿಬ್ಬರು ಗಂಡು ಮಕ್ಕಳನ್ನು ಇಂಜಿನಿಯರಿಂಗ್ ಓದಿಸಿ ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಬೆಂಗಳೂರಿಗೆ ಕಳುಹಿಸಿದ ವಿಠಲ ಶೆಟ್ರ ಬವಣೆಯ ಮಾತು. ಈ ರೀತಿಯ ಕಾರ್ಮಿಕರ ಕೊರತೆಯು ಕೇವಲ ಹಳ್ಳಿಕಡೆಯ ಕೃಷಿ ವಿಭಾಗಕ್ಕೆ ಸೀಮಿತವಾಗಿಲ್ಲ, ನಗರದ ಹೋಟೆಲ್ ನಂತಹ ವ್ಯಾಪಾರಕೇಂದ್ರಗಳ ಮಾಲಿಕರ ಬವಣೆಯೂ ಇದೆ..!
ನಮ್ಮ ದೇಶದಲ್ಲಿರುವ ವಿವಿಧ ರೀತಿಯ ಜೀವನೋಪಾಯ ಕಂಡುಕೊಳ್ಳುವ ಉದ್ಯೋಗ ಹಾಗೂ ಕಾರ್ಮಿಕರ ಘನತೆಯಲ್ಲಿರುವ ತಾರತಮ್ಯವೇ ಇಂದು ಅತಿ ಅನಿವಾರ್ಯವೆನಿಸಿದ ಕೆಲವೊಂದು ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆಯಾಗಲು ಪ್ರಮುಖ ಕಾರಣ. ಮನೋಶಾಸ್ತ್ರದ ಆಧಾರದಲ್ಲಿ ಹೇಳುವುದಾದರೆ ಈ ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವನ್ನೂ ವಿಂಗಡಿಸಿ ವರ್ಗೀಕರಿಸುವುದು ಮಾನವನಿಗೆ ಸೀಮಿತವಾದ ವಿಶೇಷ ಕೌಶಲ. ಅದೇ ರೀತಿ ವ್ಯಕ್ತಿ ಹಾಗೂ ಕಾರ್ಮಿಕರ ಘನತೆಯ ವಿಚಾರಕ್ಕೆ ಬಂದರೆ, ಮನುಷ್ಯನ ಮೆದುಳಿನಲ್ಲಿ ವಿವಿಧ ವೃತ್ತಿಗಳಿಗೆ ಅನುಸಾರವಾಗಿ ಕಾರ್ಮಿಕರ ಘನತೆಯು ಮೊದಲೇ ವರ್ಗೀಕರಣವಾಗಿರುತ್ತದೆ. ಈ ಸಿದ್ಧಮಾದರಿಯಾದ ವರ್ಗೀಕರಣದಲ್ಲಿ ವಿವಿಧ ವೃತ್ತಿ ಹಾಗೂ ಕಾರ್ಮಿಕರ ಘನತೆಗಿರುವ ಮಾನದಂಡವೇ ವಿಚಿತ್ರ. ಬೇಕಿದ್ದಲ್ಲಿ ಒಂದು ಸಲ ಯೋಚಿಸಿ ಪ್ರಯತ್ನಿಸಬಹುದು. ನೈಸರ್ಗಿಕವಾಗಿ ಜಗತ್ತಿನಲ್ಲಿನ ಮಾನವಸಂಕುಲವೆಲ್ಲವನ್ನೂ ಕಾರ್ಮಿಕರ ವರ್ಗದಲ್ಲಿ ಸೇರಿಸಬಹುದಾಗಿದೆ. ಹಾಗಿರುವಾಗ ಇಲ್ಲಿ ವಿಂಗಡಣೆಯ ಮಾತೇ ಬಾರದು. ಬದಲಾಗಿ ಇಲ್ಲಿ ಪ್ರಾಮುಖ್ಯವೆನಿಸುವುದು ಆ ಕೆಲಸದ ಮಹತ್ವ ಹಾಗೂ ಅದರಲ್ಲಿನ ಪರಿಶ್ರಮ.
ಇನ್ನೇನೋ ಸೋಲಲೇಬೇಕಿದ್ದ ಕ್ರಿಕೆಟ್ ಪಂದ್ಯದಲ್ಲಿ ಅಂತಿಮವಾಗಿ ಓರ್ವ ಬ್ಯಾಟ್ಸ್ ಮನ್ ನ ದಿಟ್ಟತನದ ಹೋರಾಟದ ನೆರವಿನಿಂದ ಭಾರತ ತಂಡವು ವಿಜಯೀಯಾದರೆ ಆ ಆಟಗಾರನ ಪರಿಶ್ರಮವನ್ನು ಮರುದಿನವಿಡೀ ಹಾಡಿ ಹೊಗಳುತ್ತೇವೆ. ಇದು ಆತನ ಪರಿಶ್ರಮಕ್ಕೆ ನಾವು ನೀಡುವ ಸನ್ಮಾನವೇನೋ ನಿಜ. ಆದರೆ ಈ ರೀತಿ ಪರಿಶ್ರಮವನ್ನು ಗುರುತಿಸುವ ಮತ್ತು ಗೌರವಿಸುವ ಮನಸ್ಥಿತಿಯು ಪ್ರತಿ ವಿಭಾಗದಲ್ಲೂ ಬರಬೇಕಿದೆ. ಒಂದೊಮ್ಮೆ ಇದು ಬಂದಲ್ಲಿ ನಿಜವಾಗಿಯೂ ಭಾರತ ಗೆದ್ದಂತೆ. ಆಗಷ್ಟೇ ಡಾಂಬರೀಕರಣವಾಗಿ ಸಿದ್ಧಗೊಂಡ ಉತ್ತಮ ರಸ್ತೆಯೊಂದರಲ್ಲಿ ಹಾಯಾಗಿ ಸಂಚರಿಸುವ ವೇಳೆ ಸರ್ಕಾರ ಇಲ್ಲವೇ ಅಲ್ಲಿನ ಜನಪ್ರತಿನಿಧಿಗಳನ್ನು ನೆನೆಯುವ ನಮ್ಮ ಮನಸ್ಸು ಅದೇಕೋ ಆ ರಸ್ತೆ ನಿರ್ಮಾಣದ ವೇಳೆ ಉರಿಬಿಸಿಲಿನ ಬೇಗೆಯಲ್ಲೂ ಅವಿರತವಾಗಿ ದುಡಿದ ಕಾರ್ಮಿಕರನ್ನು ನೆನೆಯುವಲ್ಲಿ ಕಂಜೂಸ್ ಮಾಡುತ್ತದೆ. ಬೆಳಿಗ್ಗೆ ಎದ್ದು ಹಲ್ಲುಜ್ಜುವ ಬ್ರಶ್ ನಿಂದ ಹಿಡಿದು ರಾತ್ರಿ ಮಲಗುವ ವೇಳೆ ಹಾಸುವ ಬೆಡ್ ಶೀಟ್ ತನಕ ನಾವು ನಮ್ಮ ದಿನಚರಿಯಲ್ಲಿ ಉಪಯೋಗಿಸುವ ಪ್ರತಿಯೊಂದು ವಸ್ತುವಿನಲ್ಲೂ ಕಾರ್ಮಿಕನಿದ್ದಾನೆ ಎಂಬ ಭಾವನಾತ್ಮಕ ವಿಚಾರಗಳು ನಮ್ಮ ಮೆದುಳನ್ನು ಪ್ರವೇಶಿಸಬೇಕಿದೆ. ಹಸಿದ ಹೊಟ್ಟೆಯಲ್ಲಿ ಮನೆಯಲ್ಲಿ ಕುಳಿತು ರುಚಿ ರುಚಿಯಾದ ಚಿಕನ್ ಬಿರಿಯಾನಿಯನ್ನು ಮನದಲ್ಲಿ ಆಸ್ವಾದಿಸುತ್ತಾ ಗಬಗಬನೆ ತಿನ್ನುವ ವೇಳೆಯಲ್ಲೂ ಒಂದು ಸಲ ಅದಕ್ಕೆ ಕಾರಣವಾದ ಭತ್ತ ಬೆಳೆದ ರೈತನಿಂದ ಹಿಡಿದು ಅದನ್ನು ರುಚಿ ರುಚಿಯಾಗಿ ತಯಾರಿಸಿದ ಅಮ್ಮನ ತನಕ ಎಲ್ಲರ ಪರಿಶ್ರಮವು ನಮ್ಮೆಲ್ಲರ ಮೆದುಳಿನಲ್ಲಿ ಸಂಚಾರವಾದಲ್ಲಿ ಅದೇ ಈ ದೇಶ ಕಂಡ ದೊಡ್ಡ ಗೆಲುವು.
ಸಣ್ಣ ಮಕ್ಕಳ ಒಂದು ಗುಂಪಿಗೆ ಅವರ ಭವಿಷ್ಯದ ಗುರಿಯ ವಿಚಾರವಾಗಿ ಒಂದು ಪ್ರಶ್ನೆ ಹರಿಯಬಿಟ್ಟರೆ ಅಲ್ಲಿ ಡಾಕ್ಟರ್, ಇಂಜಿನಿಯರ್, ಐಎಎಸ್, ಕ್ರಿಕೆಟರ್, ಆ್ಯಕ್ಟರ್ ಎಂಬ ಸಹಜ ಉತ್ತರಗಳು ಪ್ರತಿಧ್ವನಿಸುತ್ತವೆ. ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ಕಟ್ಟಬೇಕಿರುವ ಪುಟ್ಟ ಮಕ್ಕಳ ಪುಟ್ಟ ಮನಸ್ಸಿನಲ್ಲಿಯೇ ವೃತ್ತಿ ಘನತೆಯ ತಾರತಮ್ಯವನ್ನು ಬಿತ್ತಿದ ಪರಿಣಾಮವಿದು. ಈ ಹಿಂದೆ ಶಾಲಾ ಕಾಲೇಜು ಮಟ್ಟಗಳಲ್ಲಿ ವಿದ್ಯಾಸಂಸ್ಥೆಗೆ ನೆರವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮೂಲಕ ಶ್ರಮದಾನ ಮಾಡಿಸುವ ಕಾರ್ಯಕ್ರಮ ಬಹಳವಾಗಿ ಇತ್ತು. ನಮ್ಮ ಶಾಲೆಯ ಕಿರಿದಾದ ಆಟದ ಮೈದಾನವನ್ನು ನಾವೆಲ್ಲ ವಿದ್ಯಾರ್ಥಿಗಳೇ ಸೇರಿ ವಿಸ್ತಾರ ಮಾಡಿದ್ದೆವು. ಶಾಲಾ ವಾತಾವರಣದಲ್ಲಿ ಸಸಿ ನೆಡುವ ವನಮಹೋತ್ಸವದಂತಹ ಉತ್ತಮ ಕಾರ್ಯಕ್ರಮವೂ ವರ್ಷಕ್ಕೊಮ್ಮೆ ಕಡ್ಡಾಯವೆಂಬಂತೆ ಇತ್ತು. ಇಂತಹ ಕ್ರಿಯಾತ್ಮಕ ಶಿಕ್ಷಣ ಇಂದಿನ ಮಕ್ಕಳಿಗೆ ತೀರಾ ಅನಿವಾರ್ಯ. ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸ್ವಾವಲಂಬಿ ಬದುಕಿನ ವಿಚಾರವನ್ನು ಬಿತ್ತಬೇಕಿದೆ. ಅದರಲ್ಲೂ ಐಷಾರಾಮಿ ಜೀವನದ ನೆರಳಿನಲ್ಲಿ ಬದುಕುತ್ತಾ ಕಷ್ಟದ ಅರಿವನ್ನೇ ಪಡೆಯದ ಈಗಿನ ಮಕ್ಕಳಲ್ಲಿ ಈ ರೀತಿಯ ಶ್ರಮದಾನದಂತಹ ಕಾರ್ಯ ಮಾಡಿಸುವುದರಿಂದ ಅವರ ಮನಸ್ಸಿನಲ್ಲಿ ಜೀವನಮೌಲ್ಯದ ಚಿಂತನೆಯನ್ನು ಚಿಗುರಿಸಬಹುದು. ಸಿನಿಮಾ ನಟರನ್ನು ರೋಲ್ ಮಾಡೆಲ್ ಆಗಿ ಕಾಣುವ ಮನೋಭಾವದಲ್ಲಿ, ನೈಸರ್ಗಿಕವಾದ ನೆಲೆಗಟ್ಟಿನಲ್ಲಿ ಸ್ವಾವಲಂಬಿಯಾಗಿ ಬದುಕುವವನೇ ನಿಜವಾದ “ಹೀರೋ” ಅನ್ನುವ ಪರಿಕಲ್ಪನೆಯೂ ಸೇರಬೇಕಿದೆ…
“ಐಕಾಟ್” ಎಂಬ ಕೃಷಿ ಅಧ್ಯಯನ ಕೇಂದ್ರದ ಮೂಲಕ ಯುವ ವಿದ್ಯಾರ್ಥಿಗಳನ್ನು ಕೃಷಿಯತ್ತ ಆಕರ್ಷಿಸುತ್ತಿರುವ ಇಸ್ರೇಲ್ ನಂತಹ ದೇಶದಿಂದ ನಾವು ಸಾಕಷ್ಟು ಕಲಿಯಬೇಕಿದೆ. ಕೃಷಿಗೆ ಯೋಗ್ಯವಲ್ಲದ ಮರುಭೂಮಿಯ ಪ್ರದೇಶ ಹೊಂದಿರುವ ಆ ದೇಶವು ವಿವಿಧ ತಂತ್ರಜ್ಞಾನ ಪ್ರಯೋಗದೊಂದಿಗೆ ಹಸಿರುಕ್ರಾಂತಿಯನ್ನು ಸೃಷ್ಟಿಸಿದ ಪರಿಯು ನಿಜಕ್ಕೂ ಅದ್ಭುತ. ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಅಲ್ಲಿನ ಜನರು ತೊಡಗಿಸಿಕೊಂಡಿರುವ ರೀತಿ ಮತ್ತು ಕಂಡ ಪ್ರಗತಿಯು ಅನುಕರಣೀಯ. ಒಂದು ದೇಶ ಪ್ರಗತಿಪಥದಲ್ಲಿ ಮುನ್ನಡೆಯಬೇಕಾದರೆ ಅಲ್ಲಿನ ಜನರನ್ನು ಅದರಲ್ಲೂ ಯುವಶಕ್ತಿಯನ್ನು ಯಾವ ರೀತಿ ಸದ್ಭಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಇಸ್ರೇಲ್ ನ ಆಡಳಿತ ಉತ್ತಮ ಉದಾಹರಣೆ. ಅಲ್ಲದೆ ಅಭಿವೃದ್ಧಿ ಹೊಂದಿದ ಎಲ್ಲ ದೇಶಗಳಲ್ಲಿ ವೃತ್ತಿ ಹಾಗೂ ಕಾರ್ಮಿಕರ ಘನತೆಯಲ್ಲಿ ತಾರತಮ್ಯವಿಲ್ಲ ಎಂಬುದನ್ನು ನಾವೆಲ್ಲ ಗಮನಿಸಬೇಕಿದೆ.
ಇದು “ಟ್ರೆಂಡ್” ಅನ್ನು ಅನುಸರಿಸಿಕೊಂಡು ಅನುಸರಿಸಿಕೊಂಡು ಸಾಗುವ ಕಾಲ. ಆ ಟ್ರೆಂಡ್ ಹೇಗಿದ್ದರೂ ಯುವ ಜನಾಂಗ ಒಪ್ಪಿಕೊಳ್ಳುತ್ತದೆ, ಅಪ್ಪಿಕೊಳ್ಳುತ್ತದೆ. ಆದ್ದರಿಂದ ಇದನ್ನು ಸಮಾಜಮುಖಿಯಾಗಿಯೂ ಬಳಸಬಹುದಲ್ಲವೇ? ಉದಾಹರಣೆಗೆ ಒಂದು ಸಸಿ ನೆಟ್ಟು ಅದರ ಮುಂದೆ ನಿಂತು ಸೆಲ್ಫೀ ತೆಗೆದುಕೊಳ್ಳುವ ಟ್ರೆಂಡ್ ಒಂದೊಮ್ಮೆ ಬಂದಲ್ಲಿ ಅದೆಷ್ಟು ಕಡೆ ವಿವಿಧ ಗಿಡಗಳು ತಲೆಯೆತ್ತುತ್ತವೋ ತಿಳಿಯದು! ಮನುಷ್ಯನ ಮೂಲಭೂತ ಅಗತ್ಯತೆಗಳನ್ನು ಉತ್ಪಾದಿಸುವುದರಲ್ಲಿ ಭಾರತ ಸ್ವಾವಲಂಬಿಯಾಗಬೇಕಿದೆ. ಅದಕ್ಕಾಗಿ ಆಹಾರೋತ್ಪನ್ನದಂತಹ ಪ್ರಮುಖ ವಿಭಾಗಗಳಲ್ಲಿ ವಿವಿಧ ರೀತಿಯ ತಂತ್ರಜ್ಞಾನಗಳನ್ನು ಪರಿಚಯಿಸಿ ಕೃಷಿ ವಿಶ್ವವಿದ್ಯಾನಿಲಯಗಳನ್ನು ಎಲ್ಲೆಡೆ ನಿರ್ಮಿಸಿ ಆ ಮೂಲಕ ವಿದ್ಯಾರ್ಥಿಗಳನ್ನು ಕೃಷಿಯೆಡೆಗೆ ಆಕರ್ಷಿಸಬೇಕಿದೆ. ಈ ರೀತಿಯ ಹೈಟೆಕ್ ಸ್ಪರ್ಶದಿಂದ, ಎಲ್ಲ ಫೀಚರ್ಸ್ ಹೊಂದಿರುವ ಒಂದು ಸ್ಮಾರ್ಟ್ ಫೋನ್ ಕೇವಲ ಒಂದು ಕಾಲ್ ಅಪ್ಲಿಕೇಶನ್ ಗೆ ಬಳಕೆಯಾದಂತೆ ಭಾಸವಾಗುವ ಯುವಶಕ್ತಿಯು ಪೋಲಾಗದಂತೆ ಎಚ್ಚರವಹಿಸಬಹುದು.
ಹೀಗೆ ಎಲ್ಲ ಕೆಲಸಗಳ ಘನತೆಯನ್ನೂ ಸಮಾನ ನೆಲೆಗೆ ತಂದು ನಿಲ್ಲಿಸುವ ಮನಸ್ಥಿತಿಯನ್ನು ಸಮಾಜದಲ್ಲಿ ನಿರ್ಮಿಸಬೇಕಿದೆ. “ಟಿಪಿಕಲ್ ಇಂಡಿಯನ್ ಮೆಂಟಾಲಿಟಿ” ಎನ್ನುವ ಬಹುದೊಡ್ಡ ಮಾತು ಭಾರತದ ಸ್ವಾಭಿಮಾನದ ಪ್ರತೀಕವಾಗಿ ಪ್ರಯೋಗವಾಗಬೇಕೇ ಹೊರತು ಕೇವಲ ನಕಾರಾತ್ಮಕವಾಗಿ ಅಲ್ಲ ಎಂಬುದನ್ನು ನಿರೂಪಿಸಬೇಕಿದೆ. ವಿವಿಧತೆಯಲ್ಲಿ ಏಕತೆಯನ್ನು ಜಗತ್ತಿಗೆ ಪರಿಚಯಿಸಿದ ಭಾರತೀಯರಿಗೆ ಕಾರ್ಮಿಕರ ಘನತೆಯಲ್ಲಿ ಏಕತೆಯನ್ನು ತರುವುದು ಕಷ್ಟವಾಗದು. ದೇಶದ ಅಭಿವೃದ್ಧಿಗೆ ಸರ್ಕಾರದಿಂದ ವಿವಿಧ ಯೋಜನೆಗಳನ್ನು ನಿರೀಕ್ಷಿಸುವ ಮೊದಲು ನಾವು ಬದಲಾಗೋಣ. ದೇಶದ ಒಳಿತಿಗೆ ಪೂರಕವಾದ ಯಾವುದೇ ಕೆಲಸವನ್ನು ನಿರ್ವಹಿಸುವ ವೇಳೆ ಮುಜುಗರದಂತಹ ಭಾವನೆಗಳು ಮನಸ್ಸಿನೊಳಗೆ ಸುಳಿಯದಂತಹ ವಾತಾವರಣವನ್ನು ಸೃಷ್ಟಿಸೋಣ. ಸರ್ವಸಮಾನತೆಯ ನೆಲೆಗಟ್ಟಿನಲ್ಲಿ ಆದಷ್ಟು ನೈಸರ್ಗಿಕವಾಗಿ ಬದುಕಲು ಪ್ರಯತ್ನಿಸುವ ಮೂಲಕ ಕಾರ್ಮಿಕರ ಘನತೆಯನ್ನು ಎತ್ತಿ ಹಿಡಿಯೋಣ. ಬದಲಾವಣೆ ನಮ್ಮ ಕೈಯಲ್ಲಿದೆ!
– ಚಿದಾನಂದ ಎನ್ ಕೋಟ್ಯಾನ್
chidakotyan@gmail.com
ಶಿಕ್ಷಣದ ಕುರಿತಂತೆ ನೀವು ಹೇಳಿದ ಮಾತು ಅಕ್ಷರಶಃ ಸತ್ಯ. ಶಿಕ್ಷಣ ವಿಧಾನವೇ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸುವ ದಾರಿ. ಅದು ನಾವು ಪಡೆದ ನೆಲದ ಶಿಕ್ಷಣ ಆಗಬೇಕು.
LikeLike
ನಿಜ. ಶಿಕ್ಷಣವೆಂದರೆ ಕೇವಲ ಉದ್ಯೋಗ ಗಳಿಸುವ ಮಾರ್ಗವೊಂದೇ ಅಲ್ಲ, ಬದುಕ ಕಲಿಸುವ ಸಾಧನವದು. ಜೀವನ ಮೌಲ್ಯ ಕಲಿಸಬಲ್ಲ ರೀತಿಯಲ್ಲಿ ಶಿಕ್ಷಣ ವಿಧಾನದಲ್ಲಿ ಕ್ರಿಯಾತ್ಮಕ ಬದಲಾವಣೆ ತರುವುದು ಇಂದಿನ ತುರ್ತು ಅಗತ್ಯ. ಧನ್ಯವಾದ ಮೇಡಂ.
LikeLike
ತುಂಬಾ ಅರ್ಥಪೂರ್ಣವಾದ ಲೇಖನ.. ಇದನ್ನು ಓದಿದಾಗ ಗೂಗಲ್ ನ ಸಿ ಇ ಒ ಸುಂದರ್ ಪಿಚೈ ಅವರ ಈ ಮಾತುಗಳು ನೆನಪಿಗೆ ಬರುತ್ತವೆ: –
“ಅಮೇರಿಕದ ಶಾಲೆಗಳಲ್ಲಿ ಮಕ್ಕಳಿಗೆ ಯಾವ ಕೆಲಸ ಹೇಗೆ ಮಾಡಬೇಕು ಎಂದು ಕೇವಲ ಪಾಠ ಮಾಡುವುದಿಲ್ಲ, ಬದಲಿಗೆ ಅದನ್ನು ಮಕ್ಕಳಿಂದಲೇ ಮಾಡಿಸುತ್ತಾರೆ. ಮಾಡಿ ಕಲಿಯುವ ಈ ಮಾದರಿಯ ವ್ಯವಸ್ಥೆ ಭಾರತದ ಶಾಲೆಗಳಿಗೂ ಬರಬೇಕು. ಅದರ ಜೊತೆಗೆ ಮಕ್ಕಳಿಗೆ ರಿಸ್ಕ್ ತೆಗೆದುಕೊಳ್ಳುವುದನ್ನು ಕಲಿಸಬೇಕು. ರಿಸ್ಕ್ ತೆಗೆದುಕೊಂಡು ಸೋತರೆ ಯಾರೂ ಅವರಿಗೆ ಶಿಕ್ಷೆ ನೀಡಬಾರದು. ಆಗ ಅವರು ತಮ್ಮೊಳಗಿರುವ ಸೃಜನಶೀಲತೆಯನ್ನು ಎಲ್ಲ ದಿಕ್ಕಿನಲ್ಲೂ ಹರಿಬಿಡುತ್ತಾರೆ. ಮಕ್ಕಳನ್ನು ಸೃಜನಶೀಲರನ್ನಾಗಿ ಮಾಡಿದರೆ ಮುಂದೊಂದು ದಿನ ಅವರು ಅದ್ಭುತಗಳನ್ನು ಸೃಷ್ಟಿಸುತ್ತಾರೆ…”
LikeLiked by 1 person
sooper articl dr. keep it up..
LikeLiked by 1 person
Thank you … 👍
LikeLike
Good article.. good views.
LikeLike
Thank you …
LikeLike