
ಕ್ಷಮಿಸಿ, ಇದೊಂದು ಕಲ್ಪನೆಯಷ್ಟೇ. ಸಮೂಹ ಮಾಧ್ಯಮದೊಳಗಿನ ಅವಾಂತರವನ್ನು ಚಿತ್ರಿಸುವ ಈ ಪರಿಹಾಸ್ಯದೊಳಗೆ ವಾಸ್ತವವೂ ಇದೆ, ಸಹಾನುಭೂತಿಯೂ ಇದೆ. ಇಲ್ಲಿ ಸುದ್ದಿಯನ್ನು ವೈಭವೀಕರಿಸುವ ಉದ್ಯಮದಂತಿರುವ ಇಂದಿನ ಖಾಸಗಿ ಸುದ್ದಿ ಮಾಧ್ಯಮಗಳ ವಿಚಾರ ಬದಿಗಿರಲಿ. ಮಾಧ್ಯಮ ವ್ಯವಸ್ಥೆಯಲ್ಲಿ ಜನರಿಂದ, ಜನರಿಗಾಗಿ, ಜನರದ್ದೇ ಒಡೆತನವಿರುವ ಸಾಮಾಜಿಕ ಜಾಲತಾಣದಲ್ಲೇ ಜನ ವಿರೋಧಿ ಚಟುವಟಿಕೆಗಳಾಗುತ್ತಿರುವುದು ಆಕ್ಷೇಪಾರ್ಹ. ತಪ್ಪು ತಂತ್ರಜ್ಞಾನದ್ದಲ್ಲ, ವಾಟ್ಸಪ್, ಫೇಸ್ಬುಕ್ಕಿನ್ನದ್ದೂ ಅಲ್ಲ. ನಾವು ಅವನ್ನು ಹೇಗೆ ಸಮಾಜಮುಖಿಯಾಗಿ ಒಂದಿಷ್ಟು ಜವಾಬ್ದಾರಿಯಿಂದ ಬಳಸುತ್ತೇವೆ ಎಂಬುದರ ಮೇಲೆ ಅದರ ಅಂತಿಮ ಪ್ರಯೋಜನ ನಿಂತಿದೆ. ಇಲ್ಲಿ ಎಷ್ಟೊಂದು ಒಳ್ಳೆಯ ಚರ್ಚೆಗಳಾಗಿವೆ, ಸಾಮಾಜಿಕ ಕೆಲಸಗಳಾಗಿವೆ. ಆದರೆ ಕೆಲವು ಸೂಕ್ಷ್ಮ ಸಂವೇದನೆ ಇರದ ಅವಿವೇಕಿ ಮನಸ್ಸುಗಳಿಂದ ದೇಶದ ಪರಿಣಾಮಕಾರಿ ಮಾಧ್ಯಮಕ್ಕೆ ಬರುತ್ತಿರುವ ಕಳಂಕ ಹಾಗೂ ಅದು ಸಮಾಜದ ಮೇಲೆ ಬೀರುತ್ತಿರುವ ಪರಿಣಾಮವನ್ನು ಸಹಿಸುವುದಾದರೂ ಹೇಗೆ?
ಬಹುತೇಕ ಜನ ಸುದ್ದಿ ಎನ್ನುವುದು ವಸ್ತುನಿಷ್ಠವಾಗಿಯೇ ನಮ್ಮನ್ನು ತಲುಪುತ್ತದೆ ಎಂದು ಭಾವಿಸುತ್ತಾರಾದರೂ ಅದು ಹಾಗಿರುವುದಿಲ್ಲ ಎಂಬುದು ವಾಸ್ತವ. ಯಾವುದು ಸುದ್ದಿಯಾಗಬೇಕು? ಹೇಗೆ ಸುದ್ದಿಯಾಗಬೇಕು ಮತ್ತು ಏಕೆ ಸುದ್ದಿಯಾಗಬೇಕು ಎಂಬ ತೀರ್ಮಾನವೇ ಮೌಲ್ಯಾಧಾರಿತವಾದದ್ದು. ಒಂದು ಸುದ್ದಿ ಮಾಧ್ಯಮ ಸಂಸ್ಥೆಯು (ಅದರಲ್ಲೂ ಟಿ.ವಿ ಸುದ್ದಿ ವಾಹಿನಿ) ಆ ದಿನದ ಪ್ರಧಾನ ಸುದ್ದಿ (ಟಾಪ್ ಸ್ಟೋರಿ)ಯನ್ನು ಆರಿಸುವುದೇ ಒಂದು ವಿಶಿಷ್ಟ ರಾಜಕಾರಣ! ಯಾವ ಸುದ್ದಿಗೆ ಹೆಚ್ಚು ಬಿಕರಿಯಾಗುವ ಶಕ್ತಿಯಿದೆಯೋ ಅದು ಅಂದಿನ ಪ್ರಧಾನ “ಮಾರಾಟ ಯೋಗ್ಯ” ಸುದ್ದಿಯಾಗುತ್ತದೆ. ಇಂದಿನ ಬಹುತೇಕ ಮಾಧ್ಯಮಗಳು ಬದುಕುವುದೇ ಇಂತಹ ಸಂಧಿಗ್ಧ ಹಾಗೂ ಭಿನ್ನಾಭಿಪ್ರಾಯವುಳ್ಳ ವಿಷಯಗಳನ್ನೇ ಆಧರಿಸಿ. ಪ್ರಧಾನ ಆಹಾರದಂತಿರುವ ಈ ಸಂಧಿಗ್ಧವು ದೊಡ್ಡದಾದಷ್ಟು ಅಷ್ಟೇ ದೊಡ್ಡ ಸಂಖ್ಯೆಯ ಗ್ರಾಹಕರು ಒದಗಿ ಬರುತ್ತಾರೆ ಎಂಬುದು ವಿಪರ್ಯಾಸ.
ಇಂದಿನ ಖಾಸಗಿ ಸುದ್ದಿ ವಾಹಿನಿಯನ್ನು ಮನಬಂದಂದಂತೆ ನಿಂದಿಸುವ ನಮಗೆ ಅವನ್ನೇ ಅವಲಂಬಿಸಿ ಅದರ ಟಿ.ಆರ್.ಪಿ ಹೆಚ್ಚಿಸುವ ಅನಿವಾರ್ಯತೆಯಿರುವುದು ತುಂಬಾ ಹಾಸ್ಯಾಸ್ಪದವಾಗಿದೆ.
ಇಂದಿನ ಖಾಸಗಿ ಸುದ್ದಿ ವಾಹಿನಿಯನ್ನು ಮನಬಂದಂದಂತೆ ನಿಂದಿಸುವ ನಮಗೆ ಅವನ್ನೇ ಅವಲಂಬಿಸಿ ಅದರ ಟಿ.ಆರ್.ಪಿ ಹೆಚ್ಚಿಸುವ ಅನಿವಾರ್ಯತೆಯಿರುವುದು ತುಂಬಾ ಹಾಸ್ಯಾಸ್ಪದವಾಗಿದೆ.
ಕೋಮು ಗಲಭೆಯಂತಹ ಸೂಕ್ಷ್ಮ ವಿಚಾರಗಳಲ್ಲಿ ಮಾಧ್ಯಮದ ಜವಾಬ್ದಾರಿ ತುಂಬಾ ದೊಡ್ಡದು. ಇತ್ತೀಚೆಗೆ ಇಂತಹ ಸಮಯದಲ್ಲಿ ಟಿವಿ ಮಾಧ್ಯಮಗಳಂತೂ ಒಂದರ ಮೇಲೊಂದು ಪೈಪೋಟಿಗಿಳಿದು ಭಾವೋದ್ವೇಗದಲ್ಲಿದ್ದ ಜನತೆಯನ್ನು ಮತ್ತೆ ಬೀದಿಗಿಳಿಯುವಂತೆ ಮಾಡಿ ಅಲ್ಲೊಂದಿಷ್ಟು ಜ್ವಾಲೆಯನ್ನು ಆ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದನ್ನು ಕಂಡಿದ್ದೇವೆ. ಸೋಶಿಯಲ್ ಮೀಡಿಯಾ ಕೂಡ ಈ ವೇಳೆ ಆ ಸೂಕ್ಷ್ಮತೆಯ ಜವಾಬ್ದಾರಿಯನ್ನು ಅರಿಯದೆ ಕೋಮು ಪ್ರಚೋದನೆಯ ಬರಹಗಳನ್ನು ಎಲ್ಲೆ ಮೀರಿ ಪೋಸ್ಟ್ ಮಾಡಿ ಅದರೊಳಗೆ ಚರ್ಚೆ, ಘರ್ಷಣೆಗಳಾಗಿ ಅಸಹಿಷ್ಣುತೆಗೆ ಕಾರಣವಾಗಿದ್ದನ್ನೂ ಗಮನಿಸಿದ್ದೇವೆ. ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಸಂಶಯಾಸ್ಪದ ಸಾವಾದಾಗ ಸತ್ಯಾಂಶ ತಿಳಿಯುವ ಭರದಲ್ಲಿ ಸಾಗುವ ಅನಿಯಮಿತ ಚರ್ಚೆಯು ಅಸಂಬದ್ಧಗೊಂಡು ಕೊನೆಗೆ ಅದರ ಆಯಾಮ ಮೀರಿ ಕೆಲವೊಂದು ಪಂಗಡಗಳಾಗಿ ಬೇರೆಯದ್ದೇ ರೂಪ ಪಡೆವ ಫೇಸ್ ಬುಕ್ ಒಳಗಿನ ಅವಾಂತರವನ್ನು ಇದಾಗಲೇ ಅರಿತಿದ್ದೇವೆ. ಯಾವುದೋ ಒಂದು ಸಿದ್ಧಾಂತಕ್ಕೆ ಅಂಟಿಕೊಂಡು ಪಟ್ಟುಬಿಡದೆ ದೇಶದ ಒಳಿತನ್ನೂ ಒಪ್ಪಲಾಗದ ಖಟ್ಟರ್ ವಾದಿಗಳನ್ನೂ ಇಂದಿನ ಸಮೂಹ ಮಾಧ್ಯಮದೊಳಗೆ ಸಾಕಷ್ಟು ಕಂಡು ಬೆಂದಿದ್ದೂ ಆಗಿದೆ. ಇವೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರಬೇಕಾದ ಮಿತಿಯನ್ನು ಪ್ರಶ್ನಿಸುವಂತೆಯೂ ಮಾಡಿದೆ.
ಎಡಪಂಥ, ಬಲಪಂಥಗಳೆಂಬ ಭಿನ್ನ ವಿಚಾರವಾದಗಳು ಈ ದೇಶದೊಳಗೆ ವಿಶೇಷವಾಗಿ ಬೇರೂರಿರುವುದರಿಂದ ಸಾಮಾಜಿಕ ಜಾಲತಾಣಗಳು ಅವಕ್ಕೊಂದು ವೇದಿಕೆಯಾಗಿದೆ. ಈ ಬರಹದ ಟೈಟಲ್ ನಲ್ಲಿ “ಭಾರತಾಂಬೆ” ಎಂಬ ಪದ ಪ್ರಯೋಗಿಸಲು ನಾನು ಹಿಂದು ಮುಂದು ನೋಡಿದ್ದುಂಟು, ಯಾಕೆಂದರೆ ಆ ಪದದಲ್ಲಿ ಬಲಪಂಥವನ್ನು ಕಂಡವರೂ ಇದ್ದಾರೆ. ಅಷ್ಟರ ಮಟ್ಟಿಗೆ ಅದರ ಆಕಾರವಿದೆ. ದೇಶದ ಏಳಿಗೆಯ ವಿಚಾರದಲ್ಲಿ ಇಂತಹ ಪಂಥಗಳ ಅನಿವಾರ್ಯತೆ ಶೂನ್ಯವೆಂದೇ ಹೇಳಬಹುದು. ಆದ್ದರಿಂದ ಇಂತಹ ಎಡ-ಬಲ ವಾದಗಳ ದಾಸರಾಗದೆ ಎಲ್ಲರೊಳಗೊಂದಾಗುವ ಮಾನವತಾವಾದವನ್ನು ಮೈಗೂಡಿಸಿಕೊಳ್ಳಬೇಕಿದೆ. ಸಾರ್ವಜನಿಕ ಹಿತಕ್ಕೋಸ್ಕರ ಕೆಲವೊಮ್ಮೆ ವೈಯಕ್ತಿಕ ನಿಲುವಿನೊಂದಿಗೆ ರಾಜಿಮಾಡಿಕೊಳ್ಳಬೇಕಾದ, ತಕ್ಷಣದ ಕೆಲವೊಂದು ಮುಲಾಜಿಗೆ, ರಾಜಿಗೆ ಒಳಗಾಗುವ ಸಂದರ್ಭವೂ ಬರುತ್ತದೆ. ಅದನ್ನು ದೌರ್ಬಲ್ಯ ಅಂತ ಪರಿಗಣಿಸಬೇಕಿಲ್ಲ. ಸಾಮಾಜಿಕ ಜಾಲತಾಣಗಳನ್ನು ಇಂದಿನ ಮಕ್ಕಳೂ ಸಹ ಗಮನಿಸುವುದರಿಂದ ಇಲ್ಲಿ ಸಾಮಾಜಿಕ ಸೂಕ್ಷ್ಮತೆಯ ವಿಚಾರದಲ್ಲಿ ಒಂದಿಷ್ಟು ಜವಾಬ್ದಾರಿ ತೋರಬೇಕಾದ್ದು ಅವಶ್ಯ.
ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ಜೊತೆಗೆ ನಾಲ್ಕನೇ ಆಯಾಮವೆಂದು ಕರೆಯಲ್ಪಡುವ ಸುದ್ದಿ ಮಾಧ್ಯಮವು ಕೇವಲ ಒಂದು ಉದ್ಯಮದಂತೆ ವರ್ತಿಸದೆ ಸಾಮಾಜಿಕ ಬದ್ಧತೆಯನ್ನು ತೋರಬೇಕಾದ ಅನಿವಾರ್ಯತೆ ಭಾರತಕ್ಕಿದೆ. ಹಲವಾರು “ಗ್ರೂಪ್” ಸೃಷ್ಟಿಸುತ್ತಿರುವ ಫೇಸ್ ಬುಕ್ ನಂತ ಸಾಮಾಜಿಕ ಜಾಲತಾಣಗಳು ದೇಶವನ್ನು – ಜನರನ್ನು ಒಂದುಗೂಡಿಸುವ ತಾಣವಾಗಬೇಕಿದೆ. ಏನೇ ಆದರೂ ಬದಲಾವಣೆಯ ಮೂಲ ನಾವಲ್ಲವೇ..!
ಸ್ವಾತಂತ್ರ್ಯೋತ್ಸವದ ಶುಭಾಶಯಗಳೊಂದಿಗೆ..,
– ಚಿದಾನಂದ್ ಎನ್ ಕೋಟ್ಯಾನ್
ಉತ್ತಮ ಬರಹ
LikeLike
Thank you . . . 👍
LikeLike
Excellent. Very true
LikeLike
Thank you madam . . .
LikeLike
ಉತ್ತಮವಾದ ಚಿಂತನೆ. ಮುಖ್ಯವಾಗಿ ಜನರ ನ್ಯೂನತೆಗಳನ್ನೇ ಗುರುತಿಸಿ ಪಟ್ಟಿಮಾಡಿ ಅವುಗಳನ್ನೇ ಚಾನೆಲ್ನ ಬಂಡವಾಳವಾಗಿಸಿಕೊಂಡ ಟೀವಿ ಮಾಧ್ಯಮಗಳು, ಜನರ ನ್ಯೂನತೆಗಳೇ ಎದ್ದು ವೈರಲ್ ಆಗುವ ಸಮಾಜಿಕ ಜಾಲತಾಣಗಳು ಪ್ರಸ್ತುತ ಸಮಾಜದ ಮೇಲೆ ಬೀರಿರುವ ಪರಿಣಾಮಗಳ ಕುರಿತು ಪ್ರತಿಯೊಬ್ಬ ಭಾರತೀಯನೂ ಯೋಚಿಸಲೇಬೇಕಾದ ಅನಿವಾರ್ಯತೆ ಇದೆ. ಆದರೆ ಇಂದು ಪ್ರತಿಯೊಬ್ಬನೂ ಹೆಚ್ಚು ಯೋಚಿಸುವವನೇ ಆಗಹೊರಟಾಗ ಅವನ ಅಧ್ಬುತ ಯೋಚನೆಗಳನ್ನು ಅಭಿವ್ಯಕ್ತ ಪಡಿಸಲು ಅಗ್ಗದ ಮಾಧ್ಯಮಗಳೂ ಬೆರಳ ತುದಿಯಲ್ಲಿದ್ದರೆ ಇದು ಮೂಗುದಾರವಿಲ್ಲದ ಸಮಾಜಕ್ಕೆ ವಿಜ್ಞಾನವೇ ಸಹಾಯ ಹಸ್ತ ನೀಡಿದಂತೆ ಅನಿಸುತ್ತದೆ..
ಉತ್ತಮವಾದ ಲೇಖನ ಶೈಲಿ, ಪದಪುಂಜಗಳ ಮೇಲಿನ ಹಿಡಿತ ಉತ್ತಮವಾಗಿದೆ…
LikeLike
“ಮೂಗುದಾರವಿಲ್ಲದ ಸಮಾಜದೊಳಗಿನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಜ್ಞಾನವೇ ಸಹಾಯ ಹಸ್ತ ನೀಡಿದಂತೆ ಅನಿಸುತ್ತದೆ” ಎಂಬ ನಿಮ್ಮ ಅಭಿಪ್ರಾಯದಲ್ಲಿ ಮಾಡರ್ನ್ ಸೊಸೈಟಿಯ ಕ(ವ್ಯ)ಥೆಯಿದೆ. ಸಮಯೋಚಿತವಾಗಿದೆ.
ಧನ್ಯವಾದ ದೀಪಕ್,
ನೀಡುತ್ತಾ ಬಂದಿರುವ ಪ್ರೋತ್ಸಾಹಕ್ಕೆ …
LikeLike