ಪುಟ್ಟ ಪ್ರಪಂಚ

Putta prapancha
ಇದೊಂದು ಪುಟ್ಟ ಪ್ರಪಂಚ, ಭಾವನೆಗಳದ್ದೇ ರಾಯಭಾರ, ಎಲ್ಲಾ ಪಾತ್ರಗಳನ್ನು ನಿರ್ವಹಿಸುವವರು ಅವರೇ. ನಿರ್ದೇಶನ, ನಿರ್ಮಾಣ, ಸಂಭಾಷಣೆ, ಕಥೆ ಎಲ್ಲವೂ ಅವುಗಳದ್ದೇ.

             ಹಾಸಿಗೆಯ ಮೇಲಿನ ಬೆಡ್ ಶೀಟನ್ನು ತೆಗೆದು ಅದರಲ್ಲಿದ್ದ ಧೂಳು ಹಾರುವಂತೆ ಒಮ್ಮೆ ಜೋರಾಗಿ ಹೊಡೆದು ಮತ್ತೆ ಹಾಸಿ ಮಲಗಬೇಕೆನ್ನುವಷ್ಟರಲ್ಲಿ ಬೆರಳಲ್ಲಿದ್ದ ಉಂಗುರ ಜಾರಿ ಬುಗುರಿಯಂತೆ ಸುತ್ತ ತಿರು ತಿರುಗಿ ಬಿತ್ತು. ಒಂದರೆಕ್ಷಣ ಉಂಗುರ ಕಳೆದುಹೋಯಿತೇನೋ ಎಂಬ ಭಯ ಸುಳಿದಂತಾದರು  ಕಣ್ಣ ಮುಂದೆಯೇ ಬಿದ್ದಿತ್ತು. ಹ್ಮ್ಂ!! ಮದುವೆ ನಿಶ್ಚಿತಾರ್ಥ ಸಂದರ್ಭದಲ್ಲಿ ಇವರೇ ನನಗೆ ಈ ಉಂಗುರ ಹಾಕಿದ್ದು. ಐದು ಎರಡೇಳು ಮೂರು ಹತ್ತು ವರ್ಷವೇ ಕಳೆಯಿತು ಮದುವೆಯಾಗಿ. ಆವಾಗ ಈ ಉಂಗುರ ನನ್ನ ಬೆರಳಿಗೆ ಚಿಕ್ಕದಾಗಿತ್ತು. ಅದೆಂತೋ ಕಷ್ಟ ಪಟ್ಟು ಅಜ್ಜಿ, ತಂಗಿ ಎಲ್ಲರೂ ಸೇರಿ ಹಾಕಿದ್ದು. ಇದೀಗ ಕೈಯ್ಯಿಂದ ತಂತಾನೇ ಜಾರಿ ಹೋಗುವಷ್ಟು ದೊಡ್ಡದಾಯಿತೇ? ಚಿಕ್ಕದೊಂದು ನಗು ಮೂಡಿ ಮರೆಯಾಯಿತು ಅವಳ ಮುಖದಲಿ.

             ಬಿಕ್ಕಿ ಬಿಕ್ಕಿ ಅಳುವಷ್ಟು ಭೀಕರವಾದ ಕಥೆಯೇನು ನಡೆದಿಲ್ಲ ಬದುಕಲ್ಲಿ. ಆದರೆ, ಬದುಕಲ್ಲಿ ಹೊಸತೇನೂ ಇಲ್ಲ. ಹೊಸತರ ಕಲ್ಪನೆಯೂ ಆಕೆಯಲ್ಲಿಲ್ಲ. ಗಂಡ ದಿನಾ ಬೆಳ್ಳಗ್ಗೆ ಆಫೀಸ್‍ಗೆ ಹೋಗಿ ಸಾಯಂಕಾಲ ಬರ್ತಾನೆ. ಮಕ್ಕಳು ಶಾಲೆಗೆ ಹೋಗಿ ಬರ್ತಾವೆ. ಮನೆಯಲ್ಲಿರುವ ಮಾವನ ಆರೈಕೆ, ಅವರ ಸೇವೆ, ಮನೆಗೆಲಸ, ಬಂದು ಹೋಗುವ ನೆಂಟರಿಷ್ಟರ ಉಪಚಾರ, ಎಲ್ಲರೂ ರಜೆಯಲ್ಲಿರುವ ದಿನ ಎಲ್ಲಾದರೂ ಸುತ್ತಾಟ, ಅಥವಾ ಮನೆಯಲ್ಲೇ ಏನಾದರು ವಿಶೇಷ ಅಡುಗೆ. ಎರಡು ತಿಂಗಳಿಗೊಮ್ಮೆಯೋ, ಮೂರು ತಿಂಗಳಿಗೊಮ್ಮೆಯೋ ತವರು ಮನೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೊಸ ಸೀರೆ, ಉಡುಗೆಗಳು. ದಿನಾ ಸಂಜೆ ಸೀರಿಯಲ್ಲು, ಮಧ್ಯಾಹ್ನ ಮೂವಿ. ಒಂದಷ್ಟು ನ್ಯೂಸ್ ಚಾನಲ್‍ಗಳ ಲೊಚ ಲೊಚ. ಕೆಲವೊಮ್ಮೆ ಮಕ್ಕಳ ಹಠ ಜಗಳ, ಗಂಡನ ಟೆಂನ್ಷನ್, ಗಡಿಬಿಡಿ. ಒಂದಷ್ಟು ಫೋನಿನ ಕರೆಗಳು, ಮೆಸೇಜುಗಳು. ಬೆಳಗ್ಗೆ ಬರುವ ಹಾಲು ಹಾಕುವವ, ಪೇಪರ್ ಹಾಕುವ ಹುಡುಗರು. ಸಂಜೆ ಓರಗೆಯವರೊಡನೆ ಆಚೀಚೆ ಮನೆಗಳ, ಧಾರಾವಹಿಯ ಆಗುಹೋಗುಗಳ ಬಗ್ಗೆ ಪುಟ್ಟದೊಂದು ಕಲಾಪ, ಆಲಾಪ ಹಾಗೂ ಪ್ರಲಾಪ. ನನ್ನ ಮನೆ, ಪುಟ್ಟದೊಂದು ನಾಯಿ ಮತ್ತು ನಾನು.
             ಬದುಕು ಅದೆಷ್ಟೋ ವರ್ಷಗಳಿಂದ ಹೀಗೇ ಸಾಗುತ್ತಿದೆ. ನಾನು ಖುಷಿಯಾಗೇ ಇದ್ದೇನೆ. ಪುರಾವೆ, ನಾನು ಆಗಾಗ ನಗುತ್ತೇನೆ. ನನ್ನ ಮಕ್ಕಳ ಕಾರಣದಿಂದಾಗಿ, ಗಂಡನ ಕಾರಣದಿಂದಾಗಿ ಹಾಗೂ ನಾನು ಬದುಕುತ್ತಿರುವ ಈ ಸುತ್ತಲಿನ ಸ್ವಾಸ್ಥ್ಯ ಸಮಾಜದ ಕಾರಣದಿಂದಾಗಿ.
ಅದೆಲ್ಲೋ ಜ್ವಾಲಾಮುಖಿ ಸ್ಪೋಟ ಆಗಿ ಒಂದಷ್ಟು ಜನ ಸತ್ತೋದ್ರು, ಇನ್ನೆಲ್ಲೋ ಮಳೆ ಬಂತು, ಊರು ಮುಳುಗಿತು. ಅಲ್ಲೆಲ್ಲೋ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೆಲ್ಲೋ ಯಾವುದೋ ಸಾಂಕ್ರಾಮಿಕ ರೋಗಕ್ಕೆ ಅದೆಷ್ಟೋ ಮಂದಿ ಸುಖಾ ಸುಮ್ಮನೆ ಬಲಿಯಾದರಂತೆ. ಹೌದು, ಆಕೆಯೂ ಮರುಕ ಪಡುತ್ತಾಳೆ, ತನ್ನ ಗಂಡನಲ್ಲಿ ಹೇಳುತ್ತಾಳೆ. ಮಕ್ಕಳಲ್ಲಿ ಮಾವನಲ್ಲಿ ಎಲ್ಲರಲ್ಲೂ ಹೇಳುತ್ತಾಳೆ. ಭಯ ಪಡುತ್ತಾಳೆ,  ಹಾಗಾದರೆ ಇಲ್ಲೂ ಅಂತಹ ಜ್ವರ, ತನ್ನ ಕುಟುಂಬದ ಮಂದಿಗೆ ಬಂದರೆ? ಶಿವ ಶಿವಾ ಕಾಪಾಡಪ್ಪ ಎಂದು ಪ್ರಾರ್ಥಿಸುತ್ತಾಳೆ. ಒಂದಷ್ಟು ಸಮಯದ ನಂತರ ಮರೆತು ಬಿಡುತ್ತಾಳೆ. ಎಲ್ಲರ ಚಾಕರಿ ಮಾಡಿ ಆಕೆಗೂ ಸುಸ್ತಾಗುತ್ತದೆ. ಒಮ್ಮೊಮ್ಮೆ ಆಕೆಯೂ ಮುನಿಸಿಕೊಳ್ಳುತ್ತಾಳೆ. ರೇಗುತ್ತಾಳೆ. ನೋವಾಗಿದೆ, ಸಂಭ್ರಮವೂ ಆಗಿದೆ, ಬಸುರಲ್ಲಿ ಬಾಳಂತನದಲ್ಲಿ. ದೈಹಿಕವಾಗಷ್ಟೇ ಅಲ್ಲ, ಮಾನಸಿಕವಾಗಿಯೂ ಕೆಲವೊಮ್ಮೆ, ಸಂಬಂಧಿಕರೋ ಇನ್ನಾರೋ ಏನೋ ಅಂದಿದ್ದಕ್ಕಾಗಿ. ಆಕೆಯೂ ಅಂದಿದ್ದಾಳೆ, ಇನ್ನಾರಿಗೋ ನೋವು ಮಾಡಿದ್ದಾಳೆ. ಎಲ್ಲವನ್ನೂ ಈಗ ಮರೆತಿದ್ದಾಳೆ. ಕೆಲವೊಮ್ಮೆ ಹೋಲಿಸಿಕೊಂಡಿದ್ದಾಳೆ, ತನ್ನ ಬದುಕನ್ನು ಸಾಧಕಿಯ ಬದುಕಿನ ಜೊತೆ ತಕ್ಕಡಿಯಲ್ಲಿ ಹಾಕಿ ತೂಗ ಹೊರಟು ತನ್ನ ಭಾಗದ ತಕ್ಕಡಿಯನ್ನು ಎಳೆದು ಕೆಳಗಿಳಿಸಲು ಹೋಗಿ, ತಕ್ಕಡಿಯ ಜೊತೆ ತಾನೇ ಮೇಲಕ್ಕೆ ಹಾರಿ ಹೋದವಳನ್ನು ಮತ್ತೆ ಕೆಳಗಿಳಿಸಲು ಹರಸಾಹಸ ಪಡಬೇಕಾಯಿತು. ಜೀವನದ ಕೌತುಕಗಳ ಕುರಿತು ಬೆರಗಾಗಿದ್ದಾಳೆ. ಮೋಹಗೊಂಡಿದ್ದಾಳೆ, ಷಡ್ ವೈರಿಗಳೆಲ್ಲವೂ ಒಮ್ಮೊಮ್ಮೆ ಜೀವ ಪಡೆಯುತ್ತವೆ ಅವಳ ಒಳಗೆ. ಇನ್ನೊಮ್ಮೊಮ್ಮೆ ಕವಿ ವರ್ಣಿಸುವಂತಹ ಹೆಣ್ಣಾಗಿ ಕಾಣುತ್ತಾಳೆ. ಪ್ರೀತಿ, ಮಮತೆ, ವಾತ್ಸಲ್ಯ ಇತ್ಯಾದಿ ಇತ್ಯಾದಿಗಳ ಮೂಲ ದೇವತೆ ಆಕೆಯೇನೋ ಎಂಬಂತೆ. ಬದುಕು ಬದಲಾಗುತ್ತಲೇ ಇರುತ್ತದೆ ಎಂಬುದನ್ನು ತೀವ್ರವಾಗಿ ನಂಬಿದ್ದಾಳೆ. ಆದರೂ ಹಲವು ವರ್ಷಗಳಿಂದ ಒಂದೇ ರೀತಿಯ ಜೀವನಕ್ಕೆ ಒಗ್ಗಿಕೊಂಡಿದ್ದಾಳೆ. ಗಂಡನನ್ನು ಕಾಡಿದ್ದಾಳೆ, ಪೀಡಿಸಿದ್ದಾಳೆ. ಮಕ್ಕಳೊಂದಿಗೆ ಆಟವಾಡಿದ್ದಾಳೆ, ಪೋಷಕರ ಸಭೆಗೆ ಹಾಜರಾಗಿದ್ದಾಳೆ. ಹೀಗೆ…… ನಿತ್ಯವೂ ನೂತನ, ಗೊತ್ತು ಗುರಿಯಿಲ್ಲದ ಜೀವನದೊಡನೆ ಖುಷಿಯಾಗಿಯೇ ಒಪ್ಪಂದ ಮಾಡಿಕೊಂಡಿದ್ದಾಳೆ.
ಒಂದೇ ಒಂದು ಆತಂಕ: ಹೊಸತೊಂದು ಪ್ರಪಂಚದ ಬಗ್ಗೆ, ಆಕೆಗೆ ತಲುಪಲು ಹಿಡಿಯಲು ಸಾಧ್ಯವಾಗದ ಬದುಕಿನ ಬಗ್ಗೆ ಆಕೆಗೇನಾದರೂ ತಿಳಿದು ಹೋದರೆ? ಆಕೆಯ ಅಂತರಾಳದ ಭಾವನೆಗಳು ಸುಮ್ಮನಿದ್ದಾವೇನು? ಮತ್ತೆ ಗೆಜ್ಜೆ ಕಟ್ಟಿ ನರ್ತಿಸ ಹೊರಟಾವು. ನಿಧಾನವಾಗಿಯೇ ಆಕೆ ಕರಗಿ ಹೋದಾಳು.
             (ಇದೊಂದು ಪುಟ್ಟ ಪ್ರಪಂಚ, ಭಾವನೆಗಳದ್ದೇ ರಾಯಭಾರ, ಎಲ್ಲಾ ಪಾತ್ರಗಳನ್ನು ನಿರ್ವಹಿಸುವವರು ಅವರೇ. ನಿರ್ದೇಶನ, ನಿರ್ಮಾಣ, ಸಂಭಾಷಣೆ, ಕಥೆ ಎಲ್ಲವೂ ಅವುಗಳದ್ದೇ).

-ಪ್ರಗಲ್ಭಾ

ಒಂದ್ ಹತ್ತ್ ನಿಮಿಷಕ್ಕೆ………

IMG-20171024-WA0001
ನಾನು ನನ್ನ  ಗೆಳೆಯರನ್ನೋ ಸಂಬಂಧಿಗಳನ್ನೋ ಭೇಟಿ ಆಗ್ತೇನೆ. ಅವರ ಜೊತೆ ನಗ್ತೇನೆ, ಸಂತೋಷ ಪಡ್ತೇನೆ ಬಹುಷಃ ಮನೋಲ್ಲಾಸಕ್ಕಿಂತಲೂ ಜಾಸ್ತಿ ಇಲ್ಲಿ ಇಂಟೆನ್ಷನ್ ಏನಿರ್ತದೆ ಅಂತಂದ್ರೆ,” ದುರ್ಗಾಕಾವೇರಿ ಹೊಸಮನೆ ಫೀಲಿಂಗ್ ಹ್ಯಾಪಿ ವಿಥ್………….., ……………, ಆಂಡ್ ಫೈವ್ ಅದರ್ಸ್” ಅನ್ನೋದನ್ನ ಕಪ್ಪಾದ ದಪ್ಪ ಅಕ್ಷರಗಳ ಮೂಲಕ ಜಗತ್ತಿಗೆ ಸಾರುವುದಕ್ಕಾಗಿ. ನಾನು ಖುಷಿಯಾಗಿದ್ದೇನೆ ಅಂತ ಇಡೀ ಪ್ರಪಂಚ ತಿಳ್ಕೊಳ್ಳಿ ಅನ್ನುವಂಥ ಅದ್ಯಾವುದೋ ಒಂದು ರೀತಿಯ ಭಾವನೆ. ಇದರಿಂದ ಲಾಭ ಏನು ಅಂತಂದ್ರೆ ನಿಜ ನಂಗೊತ್ತಿಲ್ಲ, ಒಂದಷ್ಟು, ವಾವ್, ಲೈಕ್, ಹಾರ್ಟ್‍ಗಳು, ಮತ್ತೊಂದಷ್ಟು ಕಮೆಂಟ್‍ಗಳು ಸಿಗುತ್ತವಲ್ಲಾ ಅನ್ನೋ ಬಿಕ್‍ನಾಸಿ ಆಸೆಗಳು, ಕೆಲವೊಂದ್ಸಲ ಕೆಲವೊಬ್ರಿಗೆ ಹೊಟ್ಟೆ ಉರಿಲಿ ಅಂತಲೇ ಆಗಿರ್ತದೆ, ಅಷ್ಟು ಮಾತ್ರ ಸತ್ಯ!…

             ಒಬ್ಬ ಅದ್ಭುತ ಮಾತುಗಾರನ ಅದ್ಭುತವಾದ ಮಾತುಗಳನ್ನು ಕೇಳ್ತಿದ್ದೆ. ಆತ ಹೇಳ್ತಾನೆ ”ನಮ್ಮೊಳಗೊಬ್ಬ ಸಲಹೆಗಾರ,  ನಮ್ಮ ಹಿತೈಷಿ ಇರ್ತಾನೆ. ಆತ ಯಾವಾಗ್ಲೂ ನೋಡು, ಇದು ಕೆಟ್ಟದು ಹೀಗ್ ಮಾಡ್ಬೇಡ, ಅಂತ ನಾವು ತಪ್ಪು ದಾರಿ ತುಳಿಯುವಾಗ ಎಚ್ಚರಿಸ್ತಾ ಇರ್ತಾನೆ. ಆದ್ರೆ ನಾವೇನ್ ಮಾಡ್ತೇವೆ ಅಂದ್ರೆ ಅವ್ನ ತಲೆ ಮೇಲ್ ಪಟ್ ಅಂತ ಹೊಡ್ದು ಸುಮ್ನಿರು, ಪಕ್ಕದವ್ನ್ ಮಾಡ್ತಾನೆ, ನನ್ ಫ್ರೆಂಡ್ ಮಾಡ್ತಾನೆ ನಾನ್ಯಾಕೆ ಹೀಗ್ ಮಾಡ್ಬಾರ್ದು? ಅಂತ ಅವ್ನ ಮಾತನ್ನು ಕಡೆಗಣಿಸಿ ಮೂಲೆಗ್ ತಳ್ತೇವೆ. ಅವ್ನು ಒಂದು ನಾಲ್ಕೈದು ಬಾರಿ ಆ ರೀತಿ ಹೇಳ್ತಾನೆ. ಪ್ರತಿ ಬಾರಿಯೂ ಅವ್ನ್ ತಲೆ ಮೇಲ್ ಹೊಡ್ದು ಸುಮ್ನೆ ಕೂತ್ಕೊಳಿಸ್ತೇವೆ. ಆಮೇಲೆ ಅವ್ನು ನಮ್ ಜೊತೆ ಮಾತಡೋದೇ ಬಿಟ್‌ಬಿಡ್ತಾನೆ. ಅವ್ನೇ ಆತ್ಮ. ಆತ ಪೂರ್ತಿಯಾಗಿ ಸತ್ತೋಗ್ತಾನೆ. ಆಮೇಲೆ ನಮ್ಮನ್ನು ಹೇಳೋರ್ ಕೇಳೋರ್ ಇರೋದೇ ಇಲ್ಲ.  ಬೇಕಾ ಬಿಟ್ಟಿ ಮನಸ್ಸು ಎಲ್ಲೆಲ್ಲೋ ಹರಿ ಬಿಡ್ತೇವೆ. ಮುಟ್ಬೇಕಾದ ಗುರಿಯನ್ನ ಮುಟ್ಟೋದಕ್ಕೆ ಸಾಧ್ಯಾನೇ ಆಗೋದಿಲ್ಲ. ಗೆಳೆಯರೇ ಆತ್ಮ ಶಕ್ತಿಯನ್ನ ಕಳಕೊಂಡ ಮನುಷ್ಯ ಬದುಕಿದ್ದು ಸತ್ ಹಾಗೆ. ” ಅಂತ.

                      ನಿಜ, ಯಾವಾಗ್ಲು ಅಂದ್ಕೊಳ್ಳೋದು ನಾನು, ಇಲ್ಲ ಇವತ್ತಿನಿಂದ ಮೊಬೈಲ್ ಕಡಿಮೆ ಯೂಸ್ ಮಾಡ್ತೇನೆ. ಅದ್ರಿಂದ ದೂರ ಇರ್ತೇನೆ ಅಂತ. ಆದ್ರದು ಸಾಧ್ಯವೇ ಅಗೋದಿಲ್ಲ. ಯಾಕಂದ್ರೆ ಅದಾಗ್ಲೆ ಅವ್ನ ತಲೆ ಮೇಲ್ ಹೊಡ್ದು ಸುಮ್ನೆ ಕೂತ್ಕೊಳ್ಸಿದೇನೆ.  ಪರಿಣಾಮ ಮೊಬೈಲ್‍ಗೆ ಸಂಪೂರ್ಣ ಶರಣಾಗಿದೇನೆ. ದುರಂತ,  ನನಗಿವತ್ತು ಮಾಡ್ಲಿಕ್ಕೆ ಕೆಲಸ ಇಲ್ಲ, ಆದ್ರೂ ಸಮಯ ಇಲ್ಲ. ಎಲ್ಹೋಯ್ತು, ಭೂಮಿ ಅಷ್ಟು ನಿಧಾನವಾಗಿ ತಿರುಗಿ ನಮಗಾಗಿ ನೀಡಿದ ಆ ಇಪ್ಪತ್ತನಾಲ್ಕು ಗಂಟೆಗಳು? ಎಲ್ಲವನ್ನೂ ಈ ಮೊಬೈಲ್ ಅನ್ನೋ ಮಹಾನ್ ಸೃಷ್ಟಿ ನುಂಗಿ ನೀರ್ ಕುಡಿದು ಬಿಟ್ಟಿದೆ. ಕಣ್ಣುತುಂಬ ನಿದ್ದೆ ಇಲ್ಲ, ಮನ ಬಿಚ್ಚಿ ಮಾತಿಲ್ಲ, ನನ್ನ ಸುತ್ತಲಿನ ಸುಂದರವನ್ನು ಪಂಚ ಇಂದ್ರಿಯಗಳ ಮೂಲಕ ಅನುಭವಿಸಲು ಸಾಧ್ಯವಿಲ್ಲ, ಪುಸ್ತಕಗಳು, ಲೇಖನಿಗಳು ಕೇವಲ ಅಸ್ತಿಪಂಜರಗಳಾಗಿ ಅಲ್ಲೆಲ್ಲೋ ಬಿದ್ದಿವೆ. ಇಲ್ಲ, ಆ ನನ್ನ ಆತ್ಮಕ್ಕಿಂತಲೂ ಜಾಸ್ತಿ ಮೊಬೈಲ್ ನನ್ನನ್ನ ಆವರಿಸಿ ಬಿಟ್ಟಿದೆ, ಅದೆಷ್ಟರ ಮಟ್ಟಿಗೆ ಅಂತಂದ್ರೆ ಮೊಬೈಲ್ ಅನ್ನುವವ ರಾಕ್ಷಸ, ಅಂತ ಹೇಳಿದ್ರೆ ನನ್ನ ಮನಸ್ಸು ಸುತಾರಾಂ ಒಪ್ಪುವುದಿಲ್ಲ, ಬದಲಾಗಿ ನನ್ನೆಡೆಗೆ ತಿರುಗಿ ಮುಖ ಕೆಂಪು ಮಾಡಿಕೊಂಡು ‘ಗುರ್’ ಅಂತ ಹೇಳ್ತದೆ. ಯಾಕ್ ಹೀಗೆ? ತಪ್ಪು ಮೊಬೈಲ್‍ನದ್ದಲ್ಲ. ನನ್ನದೇ. ಅವ್ನಿಗೆ ಹೊಡೆದು  ಕೂತ್ಕೊಳಿಸಿದೇನಲ್ಲ….!
                   ನಾನಿನ್ನೂ ಸರಳವಾಗಿ ಹೇಳಬಲ್ಲೆ. ಮೊದಲೆಲ್ಲ ನಾನು ಶಾಲೆಯಿಂದಲೋ ಕಾಲೇಜಿನಿಂದಲೋ ಮನೆಗೆ ಹೋಗುವಾಗ ನನ್ನ ಆ ಪಶ್ಚಿಮ ಘಟ್ಟದ ಆ ಹಸುರನ್ನು ಸವಿಯಬಲ್ಲವಳಾಗಿದ್ದೆ. ಅದು ಮನಸ್ಸಿಗೆ ಹುಮ್ಮಸ್ಸನ್ನು ತುಂಬುತ್ತಿತ್ತು.

Continue reading ಒಂದ್ ಹತ್ತ್ ನಿಮಿಷಕ್ಕೆ………

ಕನಸುಗಳನ್ನು ಹೊತ್ತ ಪುಟ್ಟ ಪುಟ್ಟ ಮನಸುಗಳೊಂದಿಗೆ….

Kanasugalannu

             “ವ್ಹಾ! ಮೇಡಂ, ನೀವಿವತ್ತು ತುಂಬಾ ಚಂದ ಕಾಣ್ತಿದ್ದೀರ, ದಿನಾ ಹೀಗೇ ಪಫ಼್ ಹಾಕ್ಕೊಂಡು  ಬನ್ನಿ, ಸಾರಿ ಉಟ್ಕೊಂಡು ಬನ್ನಿ,” ವೈಷ್ಣವಿಗೆ ನಾನು ಪಫ಼್ ಹಾಕ್ಕೊಂಡು ಹೋದ್ರೆ ತುಂಬಾ ಇಷ್ಟ. ಮೇಡಂ ಚಂದ ಕಾಣ್ತಿದ್ದೀರ, ಅದೆಂತ ಮೇಡಂ ಸ್ಪೈಕ್ ಮಾಡಿದ್ದು?” ಫ಼ಾಯೀಕ್ ಕೇಳ್ತಾನೆ. “ನೀವು ಮೊನ್ನೆಯಿಂದ ಬರ್ತಾ ಇಲ್ಲ ಅಂತ ಅಮಿತ ಕೂಡಾ ಕ್ಲಾಸ್ ಗೆ ಬರ್ತಾ ಇಲ್ಲ”. ಯಾವಮ್ಮ ಹೆತ್ತ ಮಕ್ಕಳೋ ಏನೋ ಅವು ತುಂಬಾ ಹಚ್ಕೊಳ್ತವೆ. ಈ ಮಕ್ಕಳೇ ಹಾಗೆ. ಒಮ್ಮೊಮ್ಮೆ ತುಂಬಾ ತಂಟೆ ಮಾಡ್ತಾರೆ. ಸರೀ ನಾಲ್ಕು ಬಾರಿಸಿದ್ರೆ ಒಮ್ಮೆ ಡಲ್ ಆಗ್ತವೆ, ಆದ್ರೆ ಮತ್ತೆ ಮರುದಿನ ಮೇಡಂ ಮೇಡಂ ಅಂತ ಹಿಂದಿಂದ್ಲೇ ಬರ್ತಾರೆ. ಆದರೆ ಈ ಮಕ್ಕಳಿಗಿರುವ ದೊಡ್ಡ ಗುಣ ದೊಡ್ಡವರಿಗಿರುವುದಿಲ್ಲ, ಒಂದು ವಿಷ್ಯ ಸಿಕ್ಕಿದ್ರೆ ಸಾಯುವ ತನಕ ಅದನ್ನೇ ಇಟ್ಟುಕೊಂಡು ದ್ವೇಷ ಸಾಧಿಸ್ತಾರೆ. ಬಿಡಿ, ನಾವೇನು ಸಿಟ್ಟಲ್ಲಿ ಬೈದು, ಹೊಡೆದು ಮಾಡುವುದಲ್ಲ, ಅವ್ರು ಸ್ವಲ್ಪ ಓದ್ಲಿ, ಬರಿಲಿ, ಹುಷಾರಾಗ್ಲಿ ಅನ್ನುವಂತದ್ದು ಮಾತ್ರ ನಮ್ಮ ಉದ್ದೇಶ. ಮಕ್ಕಳು ತಂಟೆ ಮಾಡಿದ್ರೇನೇ ಚಂದ. ಅವ್ರು ಉಪದ್ರ ಮಾಡಿದ್ರೆ ಮಾತ್ರ ಖುಷಿ ಆಗುವುದು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ್ ಮತಕ್ಕೆ ಸೇರಿದ ವಿದ್ಯಾರ್ಥಿಗಳಿದ್ದಾರೆ. ಆದರೆ ಅವರಲ್ಲಿ ಈ ಭೇದವಿಲ್ಲ, ಎಲ್ಲರಲ್ಲೂ ಇರುವ ಒಂದೇ ಒಂದು ಗುಣ ಪ್ರೀತಿಸುವುದು. ಅದೂ ನಿಸ್ವಾರ್ಥವಾಗಿ, ಉದ್ದೇಶ ರಹಿತವಾಗಿ. ಪಿಯು, ಡಿಗ್ರಿ ವಿದ್ಯಾರ್ಥಿಗಳಿಗೂ ಪಾಠ ಮಾಡ್ತೇನೆ, ಚಿಕ್ಕ ಪ್ರೈಮರಿ ಹೈಸ್ಕೂಲ್ ಮಕ್ಕಳಿಗೂ ಟ್ಯೂಶನ್ ಕೊಡ್ತೇನೆ, ಆದ್ರೆ ಈ ಚಿಕ್ಕ ಮಕ್ಕಳಿಗೆ ಪಾಠ ಮಾಡಿದಾಗ ಆಗುವಷ್ಟು ಖುಷಿ ದೊಡ್ಡ ಮಕ್ಕಳಿಗೆ ಮಾಡಿದಾಗ ಸಿಗುವುದಿಲ್ಲ. ಬಹುಷಃ ಈ ದೊಡ್ಡ ಮಕ್ಕಳಿಗೆ ಓದು ಪರೀಕ್ಷೆ ಅಂತ ತುಂಟಾಟಕ್ಕೆ, ತರ್ಲೆಗೆ ಸಮಯ ಇರುವುದಿಲ್ಲ, ಜೊತೆಗೆ ಆ ಚಿಕ್ಕ ಮಕ್ಕಳ ಮುಗ್ಧತೆ, ಚುರುಕುತನ ಬೆಳೆಯುತ್ತಾ ಬೆಳೆಯುತ್ತಾ ಕಣ್ಮರೆಯಾಗುತ್ತದೆ.

Continue reading ಕನಸುಗಳನ್ನು ಹೊತ್ತ ಪುಟ್ಟ ಪುಟ್ಟ ಮನಸುಗಳೊಂದಿಗೆ….

ಅರ್ಥವಿಲ್ಲದ ಆಚರಣೆಗಳು

%e0%b2%85%e0%b2%b0%e0%b3%8d%e0%b2%a5%e0%b2%b5%e0%b2%bf%e0%b2%b2%e0%b3%8d%e0%b2%b2%e0%b2%a6-%e0%b2%86%e0%b2%9a%e0%b2%b0%e0%b2%a3%e0%b3%86%e0%b2%97%e0%b2%b3%e0%b3%81
…ಅವರು ಎಷ್ಟಾದರೂ ಗುಗ್ಗುಗಳು, ಓಲ್ಡ್ ಜನರೇಷನ್‍ಗಳು. ಎಲ್ಲಾ ಬಲ್ಲ, ಎಲ್ಲಾ ಪ್ರಶ್ನೆಗಳಿಗೂ ಗೂಗಲ್ ಮೂಲಕ ವೈಜ್ಞಾನಿಕ ರೀತಿಯ ಉತ್ತರ ಕಂಡುಕೊಳ್ಳುವ, ನಾವು ಮಾಡುತ್ತಿರುವುದೇನು? ನಾವು ಅನುಸರಿಸುತ್ತಿರುವ ಆಧುನಿಕ ಜೀವನ ಶೈಲಿಯಲ್ಲಿ, ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಎಷ್ಟು ಅಸಂಬದ್ಧಗಳಿಲ್ಲ!

        ಅರ್ಥವಿಲ್ಲದ ಕೆಲವು ಆಚರಣೆಗಳು ಹಿಂದಿನ ಕಾಲದಲ್ಲಿ ಮಾತ್ರವಲ್ಲ ಇಂದೂ ಇದೆ. ನಮ್ಮ ಹಿಂದಿನ ಜನಾಂಗದ, ಅಂದರೆ ನಮ್ಮ ಅಪ್ಪ – ಅಮ್ಮ, ಅತ್ತೆ – ಮಾವ, ಅಜ್ಜ – ಅಜ್ಜಿ ಮಾಡುತ್ತಿದ್ದ, ಆಚರಿಸುತ್ತಿದ್ದ ಹಾಗೂ ಆಚರಿಸಲು ಪ್ರೇರೇಪಿಸುತ್ತಿದ್ದ, ಸಂಸ್ಕೃತಿ ಎಂದು ಕರೆಯುತ್ತಿದ್ದ ಕೆಲವೊಂದು ವಿಚಾರಗಳನ್ನು ನಾವು ಅಲ್ಲಗಳೆದಿದ್ದೇವೆ, ಪ್ರಶ್ನಿಸಿದ್ದೇವೆ. “ಮಗಳೆ, ಹಣೆಗೊಂದು ಬಿಂದಿ ಇಡು, ಕೈಗೆ ಬಳೆಗಳನ್ನು ಹಾಕು, ಜೀನ್ಸ್, ಟೀ-ಷರ್ಟ್ ಬೇಡ, ಸಾರಿ ಉಡು,” ಹೀಗೆ, ಇವಿಷ್ಟೇ ಅಲ್ಲ ಇಂತಹ ಅನೇಕ ವಿಷಯಗಳನ್ನು ಅವರು ನಮ್ಮ ಮೇಲೆ ಒತ್ತಾಯ ಪೂರ್ವಕವಾಗಿ ಹೇರುತ್ತಾರೆ ಎಂದು ನಾವು ಹಲವು ಬಾರಿ ಆರೋಪಿಸಿದ್ದೇವೆ. “ಇವುಗಳನ್ನು ಆಚರಿಸದಿದ್ದರೆ ಏನಾಗುತ್ತದೆ? ನಮ್ಮಿಷ್ಟಕ್ಕೆ ಅವರೇಕೆ ಅಡ್ಡ ಬರಬೇಕು?” ಬಹುಷ: ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಅವರು ಅಸಮರ್ಥರಿದ್ದರು ಅಥವಾ ಅಷ್ಟು ಜ್ಞಾನ ಅವರಿಗಿಲ್ಲದೇ ಇರಬಹುದು ಅಥವಾ ಅಂಜಿಕೆ, ವ್ಯಥೆ, ಇವರಿಗೆ ಹೇಳಿ ಪ್ರಯೋಜನವಿಲ್ಲವೆಂದೋ ಏನೋ…. ಅವರು ಉತ್ತರಿಸುವುದಿಲ್ಲ. ಅದಕ್ಕೆ ವೈಜ್ಞಾನಿಕ ಕಾರಣಗಳಿದ್ದರೂ ಅದನ್ನು ಒಪ್ಪಲು ನಾವು ತಯಾರಿಲ್ಲ. ಬಿಡಿ…. ಅವರು ಎಷ್ಟಾದರೂ ಗುಗ್ಗುಗಳು, ಓಲ್ಡ್ ಜನರೇಷನ್‍ಗಳು. ಎಲ್ಲಾ ಬಲ್ಲ, ಎಲ್ಲಾ ಪ್ರಶ್ನೆಗಳಿಗೂ ಗೂಗಲ್ ಮೂಲಕ ವೈಜ್ಞಾನಿಕ ರೀತಿಯ ಉತ್ತರ ಕಂಡುಕೊಳ್ಳುವ, ನಾವು ಮಾಡುತ್ತಿರುವುದೇನು. ನಾವು ಅನುಸರಿಸುತ್ತಿರುವ ಆಧುನಿಕ ಜೀವನ ಶೈಲಿಯಲ್ಲಿ, ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಎಷ್ಟು ಅಸಂಬದ್ಧಗಳಿಲ್ಲ. ನಮ್ಮ ನಿಲುವನ್ನು, ನಮ್ಮ ವಿಚಾರಗಳನ್ನು ಹಿಂದಿನ ಜನಾಂಗದಂತೆಯೇ ಇನ್ನೊಬ್ಬರ ಮೇಲೆ ಹಾಗೆಯೇ ನಮ್ಮ ಹಿರಿಯರ ಮೇಲೆ ನಾವೆಷ್ಟು ಹೇರಿಲ್ಲ, ಹೇರುತ್ತಿಲ್ಲ.
             

Continue reading ಅರ್ಥವಿಲ್ಲದ ಆಚರಣೆಗಳು

ಹೊಟ್ಟೆಯೊಂದರ ರಗಳೆ ಸಾಲದೆಂದೇನೋ ವಿಧಿ…..

hrsv
…ಆ ಅನ್ನದಲ್ಲಿ ನನಗೆ ವೆನಿಜುವೆಲ್ಲಾ ಕಂಡಿತು. ಇದು ಮಿದುಳಿಗೆ ಗೊತ್ತಾಗ್ಬೋದು ಆದರೆ ಮನಸ್ಸಿಗೆ ಹೇಗೆ ಸ್ವಾಮಿ ಬುದ್ಧಿ ಹೇಳುದು? ಬಾಯಿಗೆ ನೀರಿಲ್ಲದೆ ಇನ್ನೇನು ಸಾಯ್ತಾನೆ ಅನ್ನುವವನ ಎದುರು ನಿಂತು ಬಿಸ್ಲೆರಿ ವಾಟರ್ ನಲ್ಲಿ ಕಾಲ್ತೊಳೆಯಲು, ಎಳನೀರಲ್ಲಿ ಮುಖ ತೊಳೆಯಲು ನನ್ನಿಂದಂತು ಸಾಧ್ಯ ಇಲ್ಲ. ಸ್ಲಿಮ್ ಆಗಿ ಸುಂದರವಾಗಿ ಕಾಣದಿದ್ದರೂ ಚಿಂತೆಯಿಲ್ಲ, ಒಂದಗುಳು ಅನ್ನವನ್ನು ಎಸೆಯಲಾರೆ ನಾನು. ಹನಿ ನೀರು ಪೋಲಾಗದಂತೆ ಪ್ರಯತ್ನಿಸುವೆ ನಾನು. ನೀವು……?

             ನಿಮಿಗೊತ್ತಿದ್ಯಾ ವೆನಿಜುವೆಲ್ಲಾ ದೇಶ? ದಕ್ಷಿಣಾಮೇರಿಕಾದ ಉತ್ತರದಲ್ಲಿರುವ ಒಂದು ಪುಟ್ಟ ದೇಶ. ೧೮೪೫ರಲ್ಲಿ ಪರಿಪೂರ್ಣ ಸ್ವತಂತ್ರ ರಾಷ್ಟ್ರವಾಗಿ ಘೋಷಿಸಲ್ಪಟ್ಟಿತು. ಜಗತ್ತಿನಲ್ಲೇ ಅತ್ಯಂತ ಹೆಚ್ಚು ತೈಲನಿಕ್ಷೇಪ ಇರುವಂತದ್ದು ಇದೇ ವೆನಿಜುವೆಲ್ಲಾದಲ್ಲಿ. ಎಟ್ ಪ್ರೆಸೆಂಟ್, ವೆನಿಜುವೆಲ್ಲಾ ಸ್ಥಿತಿ ಹೇಗಾಗಿದೆ ಗೊತ್ತಾ? ಹಣದುಬ್ಬರದಿಂದ ಬಳಲುತ್ತಿದೆ. ನಾನಿವತ್ತು ಟಿ ವಿ ೯ ನಲ್ಲಿ ವೆನಿಜುವೆಲ್ಲಾ ಬಗ್ಗೆ ಒಂದು ರಿಪೋರ್ಟ್ ನೋಡಿದೆ. ನಿಜಕ್ಕೂ ನಾನು ಒಂದು ಕ್ಷಣ ಬೆರಗಾದೆ. ಇಂದಿಗೂ ಜನ ಹೊಟ್ಟೆಪಾಡಿಗಾಗಿ ಈ ರೀತಿ ವರ್ತಿಸ್ತಾರ ಅಂತ. ಕೇಳಿದ್ದೆ ನಾನು, ಸೋಮಾಲಿಯಾ, ಈಥಿಯೋಪಿಯಾ, ಉಗಾಂಡಾಗಳ ಕಥೆಯನ್ನು, ಅಲ್ಲಿಯ ಬಡತನವನ್ನು, ಆ ಜನರ ಬದುಕ ಬವಣೆಯನ್ನು. ಅದನ್ನು ಟಿ ವಿ ಮೂಲಕ ಇಂದು ಕಂಡೆ. ಆ ದೇಶದ  ಒಟ್ಟಾರೆ ಜನಸಂಖ್ಯೆ ೩ ಕೋಟಿ ಅಂತೆ. ನೀವು ನಂಬ್ತೀರೋ ಬಿಡ್ತೀರೋ ಅದರಲ್ಲಿ ೨ ಕೋಟಿ ಜನರೂ ಬಡವರು ಅಂದ್ರೆ. ಕೃಷಿಯನ್ನು ಕಡೆಗಣಿಸಿದ್ದು, ಅತಿಯಾದ ಮೈನಿಂಗ್, ಟೆಕ್ನಾಲಜಿ, ಅನ್ಯದೇಶದ ಅನುಕರಣೆ ಇತ್ಯಾದಿ ಇತ್ಯಾದಿಗಳು ಅಲ್ಲಿನ ಇಂದಿನ ಸ್ಥಿತಿಗೆ ಕಾರಣವಂತೆ. ಅದೇನೇ ಇರಲಿ, ಆ ಜನರ ಪಾಡನ್ನು ವಿವರಿಸಿದ್ರೆ ನಿಮಿಗೆ ಗೊತ್ತಾಗ್ತದೋ ಇಲ್ವೋ, ನನಿಗಂತು ಅದನ್ನು ನೋಡಿ ತಲೆ ಹಾಳಾಯ್ತು.

Continue reading ಹೊಟ್ಟೆಯೊಂದರ ರಗಳೆ ಸಾಲದೆಂದೇನೋ ವಿಧಿ…..

ಎಲೆ ಉದುರಿದ ಮೇಲೆ…..

ele 2

ಜ್ವಾಲಾಮುಖಿ ಹೊರಬಂದು ಸಹಸ್ರಾರು ವರ್ಷಗಳು ಸಂದರೂ ಆ ಪ್ರದೇಶದಲ್ಲಿ ಅದರ ಆಗಮನದ ಗುರುತು ಅಚ್ಚಳಿಯದಂತೆ ಒತ್ತಿರುತ್ತದೆ. ಅಂತೆಯೇ ಆ ನನ್ನ ದಿನಗಳು…..ನೆನಪುಗಳು ಮತ್ತೆ ಮತ್ತೆ ಕಾಡುತ್ತಿವೆ, ನನ್ನೆದೆಯನ್ನು ಸುಡುತ್ತಿವೆ…..

 

            ನಾನೆಲ್ಲೋ ಸೋತೆ… ಸಿಗದಿದ್ದದ್ದನ್ನು ಒತ್ತಾಯಪೂರ್ವಕವಾಗಿ ಪಡೆಯಲು ಹೊರಟೆ…ಬಲತ್ಕರಿಸಿದೆನೇನೋ…? ಮತ್ತೆ ಅತ್ತೆ, ಜೋರಾಗಿऽऽऽ…

Continue reading ಎಲೆ ಉದುರಿದ ಮೇಲೆ…..

ಪಿ. ಎಚ್. ಸೆವೆನ್ (ಸುಮ್ಮನೆ ಗೀಚಿದ್ದು)

1415029394_b3d71203be- 9
ವಾಟ್ಸಪ್, ಫೇಸ್ ಬುಕ್, ಹೈಕ್, ಹ್ಯಾಂಗ್ ಔಟ್, ಗೂಗಲ್ ಮ್ಯಾಪ್, ಕ್ಯಾಂಡಿ ಕ್ರಷ್, ಡಾಕ್ಟರ್ ಡ್ರೈವ್, ಸ್ಕೆಚ್ ಗುರು, ಸ್ನ್ಯಾಪ್ ಡೀಲ್ ಗಳನ್ನು ತುದಿಬೆರಳಿನಿಂದ ಸ್ಪರ್ಶಿಸದೆ ದಿನಗಳೆಷ್ಟೋ ಸಂದವು. ಲ್ಯಾಪ್ ಟಾಪ್ ಗೆ ಚಳಿ ಹಿಡಿದಿರಬಹುದು. ಬ್ರೇಕ್ ಇಲ್ಲದ, ಚೈನ್ ಕಟ್ಟಾದ, ಟಯರ್ ಪಂಕ್ಚರ್ ಆದ, ಸೀಟು ಹರಿದ, ಕ್ಯಾರಿಯರ್ ಮುರಿದ, ಪೆಡಲ್ ಲೂಸ್ ಆದ, ಎಣ್ಣೆ ನೀರು ಕಾಣದೆ ಧೂಳು ಹಿಡಿದು ಮೂಲೆಯಲ್ಲಿ ಬಿದ್ದ ಹಳೇ ಗುಜುರಿ ಹರ್ಕ್ಯುಲೆಸ್ ಸೈಕಲ್ ನಂತಾಗಿದೆ ಜೀವನ !!! ಕೋಲ್ಡೂ ಅಲ್ಲ, ಹಾಟೂ ಅಲ್ಲ, ಮೀಡಿಯಂ ಹೌದಾಂತ ಗೊತ್ತಿಲ್ಲ. ಆ್ಯಸಿಡ್ಡೂ ಅಲ್ಲ, ಬೇಸೂ ಅಲ್ಲ. ನನಿಗದನ್ನ ಪಿ. ಎಚ್. ಸೆವೆನ್ ಅಂತ ಕರೀಲಿಕ್ಕೆ ಇಷ್ಟ.

 

             ವಯಸ್ಸು ಎಪ್ಪತ್ತಾಗ್ಲಿಲ್ಲ, ಆದ್ರೂ ಇಪ್ಪತ್ತರ ಹುಮ್ಮಸ್ಸಿಲ್ಲ. ಬದುಕಲ್ಲಿ ಇಂಟರೆಸ್ಟೇ ಇಲ್ಲ. ಬದುಕಬೇಕು ಅಂತ ಅನ್ನಿಸ್ತಾನೇ ಇಲ್ಲ. ಹಾಗಂತ ಸಾಯ್ಲಿಕ್ಕೂ ಬೋರು. ‘ಬೇಕು’ ಅನ್ನಿಸುವುದಿಲ್ಲ, ಬೇಡಾಂತಲೂ ಅನ್ನಿಸುವುದಿಲ್ಲ. ಚೈತನ್ಯ ಇಲ್ಲ. ಶಕ್ತಿ ಇದೆಯಾ ಅಂತ  ಪರೀಕ್ಷಿಸ್ಲಿಕ್ಕೆ ಮನಸ್ಸಿಲ್ಲ. ನಿರ್ಲಿಪ್ತ ಭಾವ. ಬ್ರೇಕ್ ಇಲ್ಲದ, ಚೈನ್ ಕಟ್ಟಾದ, ಟಯರ್ ಪಂಕ್ಚರ್ ಆದ, ಸೀಟು ಹರಿದ, ಕ್ಯಾರಿಯರ್ ಮುರಿದ, ಪೆಡಲ್ ಲೂಸ್ ಆದ, ಎಣ್ಣೆ ನೀರು ಕಾಣದೆ ಧೂಳು ಹಿಡಿದು ಮೂಲೆಯಲ್ಲಿ ಬಿದ್ದ ಹಳೇ ಗುಜುರಿ ಹರ್ಕ್ಯುಲೆಸ್ ಸೈಕಲ್ ನಂತಾಗಿದೆ ಜೀವನ.

Continue reading ಪಿ. ಎಚ್. ಸೆವೆನ್ (ಸುಮ್ಮನೆ ಗೀಚಿದ್ದು)