
ಹಾಯ್ ಬಾಲ್ಯ,
ಯಾಕೋ ತುಂಬಾ ಕಾಡುತ್ತಿದ್ದೀಯಾ..? ನೀನು ಇನ್ನೊಮ್ಮೆಯಾದರೂ ಸಿಗಬಾರದೇ ಅನಿಸುತ್ತಿದೆ. ಹೊರಗಡೆ ಮಳೆ ಧೋ ಎಂದು ಸುರಿಯುತ್ತಿದ್ದರೆ, ಮನೆಯಲ್ಲಿ ಕುಳಿತು ಹಲಸಿನ ಹಪ್ಪಳ ಮತ್ತು ತೆಂಗಿನಕಾಯಿ ಮೆಲ್ಲುತ್ತಿದ್ದ ಆ ನೆನಪು ಹಾಗೆಯೇ ಕಣ್ಣಿಗೆ ಕಟ್ಟುತ್ತಿದೆ,
ಇನ್ನು, ಮಳೆ ಬಿಟ್ಟ ಅನಂತರ ನಮ್ಮ ಮನೆಯ ಸುತ್ತ ಮುತ್ತ ಒಂದು ಚಿಕ್ಕ ಪಕ್ಷಿ ಸಂಗ್ರಹಾಲಯವೇ ಆಗುತ್ತಿತ್ತು. ಮಿಂಚುಳ್ಳಿ, ಕಾಜಾಣ, ಮರಕುಟಿಗ, ಕಾಗೆ, ಮೈನಾ, ಇವೆಲ್ಲ ಮನೆಯ ಅಂಗಳದ ಮೂಲೆಯಲ್ಲಿ ಏಳುವ ಪತಂಗಕ್ಕಾಗಿ ಕಾಯುತ್ತಿದ್ದವು. ಅವುಗಳೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದ ಧ್ವನಿಗಳು ಈಗಲೂ ಹಾಗೆಯೇ ಕೇಳಿಸುವಂತಾಗುತ್ತಿದೆ. ಮತ್ತೆ ಈ ಕಾಜಾಣದ ಮಿಮಿಕ್ರಿ ಅಂತೂ ಎಷ್ಟೋ ಸಲ ಬೆಚ್ಚಿ ಬೀಳಿಸಿದ್ದಿದೆ. ಅಂತಹ ಸುಂದರ ದಿನಗಳು ಇನ್ನೊಮ್ಮೆ ಸಿಗಲು ಸಾಧ್ಯವೇ?!.. ಇನ್ನೊಮ್ಮೆ ನನ್ನ ಜೀವನದಲ್ಲಿ ಬರುವೆಯಾ ನೀನು?…