
– ಚಿದಾನಂದ್ ಎನ್ ಕೋಟ್ಯಾನ್
– ಚಿದಾನಂದ್ ಎನ್ ಕೋಟ್ಯಾನ್
– ಚಿದಾನಂದ್ ಎನ್ ಕೋಟ್ಯಾನ್
– ಚಿದಾನಂದ್ ಎನ್ ಕೋಟ್ಯಾನ್
ಅದು ರೈಲ್ವೇ ನಿಲ್ದಾಣದ ಟಿಕೆಟ್ ಕೌಂಟರ್. ಟಿಕೆಟ್ ಪಡೆಯುತ್ತಲೇ ಆ ಯುವಕ ನೀಡಿದ್ದ ಡೆಬಿಟ್ ಕಾರ್ಡನ್ನು ಕಛೇರಿಯೊಳಗಿದ್ದಾಕೆ ನಿರಾಕರಿಸಿ ಕ್ಯಾಶ್ ನೀಡುವಂತೆ ಒತ್ತಾಯಿಸಿದಳು. ಸ್ವೈಪಿಂಗ್ ಮೆಶಿನ್ ನೆಟ್ವರ್ಕ್ ಕೆಟ್ಟಿದ್ದರಿಂದ ಆತನಿಗೆ ಕ್ಯಾಶ್ ನೀಡುವುದು ಅನಿವಾರ್ಯವೇ ಆಗಿತ್ತು. ಆತ ಸುಮ್ಮನಾಗಲಿಲ್ಲ. ಅಲ್ಲಿದ್ದಿದ್ದು ಹೆಣ್ಣೆಂಬ ಗಣನೆಯೂ ಇಲ್ಲದೇ ವೈಯಕ್ತಿಕವಾಗಿ ನಿಂದಿಸುತ್ತಲೇ ಕಿರುಚಾಡಿದ ಆತ, “ಸಿಸ್ಟಮ್ ನ ಸರಿ ಇಲ್ದಿದ್ರೆ ಅದು ನಿಮ್ ಪ್ರಾಬ್ಲೆಮ್ ರೀ, ನಮ್ಗ್ಯಾಕೆ ಪ್ರಾಬ್ಲೆಮ್ ಕೊಡ್ತೀರಾ, ಇಷ್ಟಕ್ಕೂ ನಮ್ ದುಡ್ಡಿಂದಲೇ ನೀವುಗಳು ಸಂಬಳ ತಗೋತಿದ್ದೀರಾ ನೆಂಪಿಟ್ಕೊಳ್ಳಿ” ಎನ್ನುತ್ತ ರ‍್ಯಾಶ್ ನಲ್ಲೇ ಕ್ಯಾಶ್ ನೀಡಿ ಹೊರಟ. ತನ್ನದಲ್ಲದ ತಪ್ಪಿಗೆ, ತನಗರಿಯದ ಜವಾಬ್ದಾರಿಗೆ ಅವಮಾನದ ಮಾತುಗಳನ್ನೇ ಕೇಳಬೇಕಾದ ಆಕೆ ಕಣ್ಣೀರಿಡುವುದೊಂದೇ ಬಾಕಿ.
ಅವ್ಯವಸ್ಥೆಯ ಕುರಿತಾಗಿ ಕಿಡಿಕಾರುವುದು ನಮ್ಮಲ್ಲಿ ಸರ್ವೇಸಾಮಾನ್ಯವಾದಂತೆಯೇ ಮೇಲಿನ ಸನ್ನಿವೇಶದಲ್ಲಿನ ಆವೇಶವೂ ಸಹಜವೇ. ಆದರೆ ಅದು ಬ್ಯಾಂಕ್ ಅಥವಾ ಹಠಾತ್ತಾಗಿ ಆಗುವ ನೆಟ್ವರ್ಕಿಂಗ್ ಗೆ ಸಂಬಂಧಿಸಿದ ಸಮಸ್ಯೆಯಾದ್ದರಿಂದ ಅಲ್ಲಿ ಕಂಪ್ಯೂಟರ್ ಮುಂದೆ ಕೂತು ಟಿಕೆಟ್ ನೀಡುವವರನ್ನು ನಿಂದಿಸುವುದರಲ್ಲಿ ಅದೇನು ಪ್ರಯೋಜನವೋ? ಆತ ಅಂದುಕೊಂಡಂತೆ ಗ್ರಾಹಕರ ಹಣದಿಂದಲೇ ಆ ಸಂಸ್ಥೆಯ ದುಡಿಮೆಗಾರರಿಗೆ ಸಂಬಳ ನೀಡಿದ್ದಿರಬಹುದು. ಆದರೆ ಅವರೆಲ್ಲರ ದುಡಿಮೆಯಿಂದಲೇ ಆ ಗ್ರಾಹಕರೆಲ್ಲರೂ ರೈಲಿನಲಿ ಸುಗಮವಾಗಿ ಸಂಚರಿಸಿರುವಾಗ ಅದೊಂದು ‘ನೆಟ್ವರ್ಕ್’ ರೀತಿಯ ಪ್ರಕ್ರಿಯೆಯಲ್ಲವೆ. ಅದುವೇ ಕುಟುಂಬ. ಇಂತಹ ಹಲವು ಸಂಪರ್ಕ ಸಾಧನದಿಂದಲೇ ದೇಶವೆಂಬುದನ್ನು ಅರಿಯಬೇಕಿದೆ.
ತನ್ನ ಬಹುಪಾಲು ಸೌಖ್ಯವು ಪರೋಕ್ಷವಾದ ಅವೆಷ್ಟೋ ಜನ ಶ್ರಮಿಕರ ಪರಿಣಾಮವೆಂದು ಅರಿತಾಗ ಈ ಜಗವೇ ಒಂದು ಕುಟುಂಬದಂತೆ ಕಾಣುವುದು. ಪ್ರತಿಯೊಂದು ದುಡಿಮೆಯು ನಾನಾ ರೂಪದಲ್ಲಿ ಪ್ರತಿಯೊಬ್ಬರನ್ನು ಸಂಧಿಸುವುದು. ಈ ದೇಶದ ಜಿಡಿಪಿಯಿಂದ ಹಿಡಿದು ಎಲ್ಲಾ ಏಳ್ಗೆಗೂ ನಿಸರ್ಗವೇ ಮೂಲ, ಕೃಷಿಕ-ಶ್ರಮಿಕ-ಶಿಕ್ಷಕ-ಸೈನಿಕ ಇವರುಗಳೇ ಸಾರ್ವಕಾಲಿಕ ಶಕ್ತಿಯೆಂಬುದನ್ನು ತಂತ್ರಜ್ಞಾನವೆಷ್ಟೇ ಬಂದರೂ ಮರೆಯಲಾಗದು. ಈ ನಾಲ್ಕು ವಿಭಾಗಗಳಿಗೆ ಘನತೆ, ಮಾನ್ಯತೆ ನೀಡುವುದು ನಮ್ಮೊಳಗಿನ ಸಂಸ್ಕಾರವಾಗಬೇಕು. ಇಂದು ವ್ಯಾಪಕವಾಗಿರುವ “ಟ್ರೆಂಡ್” ಎಂಬ ಕುರುಡು ವ್ಯಾಮೋಹವು ದೇಶದ ಭವಿಷ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರದಂತೆ ಎಚ್ಚರವಹಿಸಬೇಕಿದೆ.
ದೇಶ ಭಕ್ತರಾಗುವುದು ಧ್ವಜಕ್ಕೆ ಸೆಲ್ಯೂಟ್ ಹೊಡೆದ ಅಥವಾ ರಾಷ್ಟ್ರಗೀತೆ ಹಾಡಿದ ಅಥವಾ ರಾಷ್ಟ್ರೀಯತೆ ಬಗ್ಗೆ ನಾನಾ ಆಯಾಮ ಕಲ್ಪಿಸಿ ಮಾತನಾಡಿದ ಕಾರಣದಿಂದಲ್ಲ. ದೇಶದೊಳಗೆಲ್ಲರೂ ಸಮಾನರೆಂಬ ಸಾಮಾಜಿಕ ನ್ಯಾಯದೊಂದಿಗೆ, ಎಲ್ಲರೊಳಗೊಂದಾಗಿ ಕುಟುಂಬದಂತೆ ಬದುಕುವ ಸ್ಪಂದನೆಯ ಭಾವದೊಳಗಿದೆ ದೇಶಭಕ್ತಿ. ಪ್ರಾಮಾಣಿಕವಾಗಿ ದುಡಿಯುವಾತ ದೇಶಭಕ್ತಿಯ ವಿಚಾರದಲ್ಲಿ ಯಾವುದೇ ಭಾವ ಪ್ರದರ್ಶಿಸದಿದ್ದ ಮಾತ್ರಕ್ಕೆ ಆತ ದೇಶ ವಿರೋಧಿಯಾಗಲಾರ, ಆತನೇ ಭಾರತಾಂಬೆಗೆ ಪ್ರಿಯ. ಆದ್ದರಿಂದ ಶ್ರಮಿಕರನ್ನು ಗೌರವಿಸುವುದೇ ಒಂದು ದೇಶಭಕ್ತಿ. ಅದುವೇ ದೇಶವನ್ನು ಬದಲಾಯಿಸಬಲ್ಲದು.
ಮೇಲೆ ಆತ ಮಾಡಿದ ರೀತಿಯಲ್ಲಿ ಯಾರದ್ದೋ ತಪ್ಪಿಗೆ ಇನ್ಯಾರನ್ನೋ ನಿಂದಿಸಿ ಜಗಳವಾಡಿದಂತೆ ಅಪ್ರಯೋಜಕ ವೈಚಾರಿಕ ಕಲಹಗಳು ಸಾಮರಸ್ಯಕ್ಕೊಂದು ತಿರುಗುಬಾಣವಾಗಿದೆ. ಈ ದೇಶದ ಆಡಳಿತಾತ್ಮಕ ಹಿತಾಸಕ್ತಿ ಅಥವಾ ಇನ್ಯಾವುದರಿಂದಲೋ ಋಣಾತ್ಮಕವಾಗಿ ತಿರುಗುವ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳು, ಜನಸಾಮಾನ್ಯರಲ್ಲಿ ಚರ್ಚೆ, ಕುಹಕ, ಘರ್ಷಣೆಗಳಾಗಿ ಭಾವೋದ್ವೇಗಕ್ಕೊಳಗಾಗುವ ಮತ್ತು ಪ್ರಯೋಜನಕ್ಕೇ ಬಾರದೆ ವ್ಯತಿರಿಕ್ತವಾಗುವ ಹಲವು ವೈಚಾರಿಕ ದ್ವಂದ್ವಗಳಿವೆ. ಅವು ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುತ್ತಲೇ ಇವೆ.
ಈ ದೇಶದೊಳಗಿನ ಸಿದ್ಧಾಂತಗಳೇ ದಂದ್ವ ಎನ್ನುವಷ್ಟರಟ್ಟು ಮಟ್ಟಿಗೆ ನಾವಿದ್ದೇವೆ. ದಶಕದ ಆಚೆಗೆ ಈ ಸಮಸ್ಯೆಯಿರಲಿಲ್ಲ. ಈ ಫೇಸ್‌ಬುಕ್ ಬಂತು ನೋಡಿ, ಹಲವು ಸಿದ್ಧಾಂತದ ಅಭಿಪ್ರಾಯಗಳು ಅಭಿವ್ಯಕ್ತಿಯಾಗಿ ಒಂದೆಡೆ ಸೇರಿ ಎಡ-ಬಲವೆಂಬ ಸಂಘರ್ಷ ಮಿತಿ ಮೀರಿ ಹೋಗಿಯಾಯಿತು. ಈ ಕಡೆ ವ್ಯವಹಾರಿಕ ಸುದ್ದಿ ಮಾಧ್ಯಮಗಳ ಅಬ್ಬರವನ್ನಂತೂ ಕೇಳಬೇಕೆ. ಬಹುತೇಕ ಎಲ್ಲಾ ವಿಚಾರಗಳಲ್ಲೂ ಯಾರೋ ಕೆಲವರು ಪ್ರಚಾರದ ತೆವಲು, ವೈಯಕ್ತಿಕ ಹಿತಾಸಕ್ತಿಗೋಸ್ಕರ ಪ್ರಸ್ತಾಪಿಸುವ ವಿಚಾರಗಳನ್ನೇ ಸಾರ್ವಜನಿಕ ಅಭಿಪ್ರಾಯ ಎಂಬಂತೆ ಇಂದಿನ ಸಮೂಹ ಮಾಧ್ಯಮಗಳು ಬಿಂಬಿಸುತ್ತಿವೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ‘ಮಾತಾಡೋನೇ ಮಹಾಶೂರ’ನಾಗಿಬಿಟ್ಟಿದ್ದಾನೆ. ಮನಸ್ಸಿಗೆ ಮಸಾಲೆ ತುಂಬಿದರಷ್ಟೇ ಸಾಕು ಅದು ಸಮಾಜದ ಸ್ವಾಸ್ಥ್ಯ, ದೇಶದ ಹಿತ ಎಲ್ಲವನ್ನೂ ಮೀರಿ ಬಹುಜನರ ಅಭಿಪ್ರಾಯವಾಗಿ ಕೊನೆಗೆ ಅದೇ ಗ್ರಾಂಥಿಕ ನಿಲುವೆಂಬತಾಗುತ್ತದೆ.
ಈಗಿನ ಪಂಥೀಯ ಸಮರಕ್ಕೆ ವೇದಿಕೆಯಂತಾಗಿರುವ ಫೇಸ್ಬುಕ್, ಸುದ್ದಿವಾಹಿನಿಗಳನ್ನು ನೋಡ್ತಿದ್ರೆ ಹೊರಗೆ ಎಷ್ಟೊಂದು ಪ್ರಕ್ಷುಬ್ಧ ಪರಿಸ್ಥಿತಿ ಇರಬಹುದು ಅಂತ ಆತಂಕವಾಗಬೇಕು. ಹೊರಗೆ ಬಂದರೆ ಎಡ-ಬಲ, ಬಿಜೆಪಿ-ಕಾಂಗ್ರೆಸ್, ಹಿಂದೂ-ಮುಸ್ಲಿಂ ಯಾವುದೂ ಇಲ್ಲ. ನಮ್ಮ ಜಾತಿಯವರ ಅಂಗಡೀಲೇ ವ್ಯಾಪಾರ ಮಾಡಬೇಕು ಅಂತ ಯಾರೂ ಮಾತಾಡ್ತಿಲ್ಲ. ಒಂದು ಮುಸ್ಲಿಂ ಕುಟುಂಬ ಅಯ್ಯಂಗಾರ್ ಬೇಕರಿಯಲ್ಲಿ ಆರಾಮಾಗಿ ಅದೇನೋ ತಿಂತಾ ಇದ್ದಾರೆ. ಲಕ್ಷಾಂತರ ಜನಸಾಮಾನ್ಯರು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಯಾರ ಮೇಲೂ ಯಾರಿಗೂ ದ್ವೇಷವಿದ್ದಂತೆ ಕಾಣಿಸುತ್ತಿಲ್ಲ. ಇಲ್ಲಿ ಎಲ್ಲವೂ ಸೃಷ್ಟಿ, ಎಲ್ಲವೂ ದ್ವಂದ್ವ.
ಈ ರೀತಿ ಈ ದೇಶದ ಆಡಳಿತದೊಳಗಿನ ರಾಜಕಾರಣ ಮತ್ತು ಹಲವು ವ್ಯವಹಾರಿಕ ಸ್ವಹಿತಾಸಕ್ತಿಗಳು ಸೃಷ್ಟಿಸುವ ಅವಾಂತರಗಳು ಜನರ ದಿಕ್ಕು ತಪ್ಪಿಸಿದ ಪರಿಣಾಮ, ವಿಭಾಗಗಳು ಅತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ನಾವು ನಾವುಗಳು ಕಚ್ಚಾಡುವಂತಾಗಿರುವುದು ದೇಶದ ಭವಿಷ್ಯಕ್ಕಂತೂ ಒಳಿತಲ್ಲ. ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮೆಲುಕು ಹಾಕಿದರಷ್ಟೇ ಸಾಲದು, ಸ್ವತಂತ್ರ ಭಾರತವನ್ನು ಸ್ವಾಸ್ಥ್ಯದಿಂದ ಮುನ್ನಡೆಸುವುದೇ ವಾಸ್ತವದ ಹೊಣೆಗಾರಿಕೆ ಮತ್ತು ಸೇವೆ. ಚಲಿಸುವ ಕಾರು ಬಿಟ್ಟು ಕೀಕೀ ಡ್ಯಾನ್ಸ್ ಮಾಡುವುದನ್ನು ಟ್ರೆಂಡ್ ಆಗಿಸುವ ಬದಲು, ಅದೇನಾದರೂ ಒಂದು ಗಿಡ ನೆಟ್ಟು ದೇಸೀ ನಾಟ್ಯ ಮಾಡುವ ಟ್ರೆಂಡ್ ಬರಿಸಿದರೆ ಅದುವೇ ಈ ದೇಶದೊಳಗಿನ ಕ್ರಾಂತಿ.
ಕೊನೆಯದಾಗಿ, ದೇಶಪ್ರೇಮವು ಮರೆಯಾಗುತ್ತಿರುವ ನಮ್ಮ ಸ್ವಂತಿಕೆಯ ದೇಸೀತನವನ್ನು ಉಳಿಸಿ ಬೆಳೆಸುವುದರಲ್ಲಿದೆ. ಪ್ರಾಮಾಣಿಕ ದುಡಿಮೆಯಲ್ಲಿದೆ. ಎಲ್ಲರನ್ನೂ, ಎಲ್ಲಾ ದುಡಿಮೆಯನ್ನೂ ಸಮಾನಾಗಿ ಕಾಣುವಲ್ಲಿದೆ. ಈ ದೇಶದ ಕಾನೂನು, ಒಕ್ಕೂಟ ವ್ಯವಸ್ಥೆಯನ್ನರಿತು ಬಾಳುವುದರಲ್ಲಿದೆ. ಉತ್ತಮ ಸಂಸ್ಕಾರದಲ್ಲಿದೆ. ವಿದ್ಯೆಯಲ್ಲಿದೆ. ಸತ್ವಯುತ, ಬೌದ್ಧಿಕ ಆಲೋಚನೆಯಲ್ಲಿದೆ. ಒಟ್ಟಿನಲ್ಲಿ ಅದು ಕ್ರಿಯೆಯಲ್ಲಿದೆ.
ಸ್ವಾತಂತ್ರ್ಯೋತ್ಸವದ ಶುಭಾಶಯಗಳೊಂದಿಗೆ,
– ಚಿದಾನಂದ್ ಎನ್ ಕೋಟ್ಯಾನ್
ಮತ್ತೆ ಮತ್ತೆ ಅರಿವಾಗುತಿಹುದು;
ಶಿಕ್ಷಣವೆಂದರೆ ಅಂಕ ಗಳಿಕೆಯಲ್ಲ;
ಉದ್ಯೋಗದ ಮಾರ್ಗವೊಂದೇ ಅಲ್ಲ;
ಬದುಕ ಕಲಿಸುವ ಮಾಧ್ಯಮವದು.
ಪಂಥವೆಂಬ ವಿಭಾಗದಲಿ ಸಿಲುಕದೆ;
ವಿಶ್ವ ಮಾನವನಾಗಿಸುವ ಸಾಧನವದು.
ಮರೆಯಾಗುತಿಹ ದೇಸೀತನವನು
ಮರಳಿ ಪಡೆಯಲೆಂದಿರುವ ಅಸ್ತ್ರವದು;
ಸಂಸ್ಕೃತಿ ಸಂಸ್ಕಾರಗಳ ಸಾಕಾರವದು
ಪ್ರತಿಷ್ಠೆಯೆಂಬುದೇಕೆ ಇವೆರಡರಲಿ?
ವಿಕಾಸವಾಗಲೇಬೇಕಿದೆ ಗುಣಮಟ್ಟವು;
ಸರ್ಕಾರಿ ಶಾಲೆ ಜನಮಾನಸವ ಮುಟ್ಟಲು.
ತಪ್ಪೇನಿದೆ ಒಂದರಿಂದಲೇ ಇಂಗ್ಲೀಷ್
ಬರೀ ಭಾಷೆಯಾಗಿ ಕಲಿಕೆಯಾದಲ್ಲಿ;
ಕನ್ನಡವು ಹೃದಯದ ಭಾಷೆಯಾಗಿರಲು?
ಮಕ್ಕಳಲಿ ಜೀವನ ಮೌಲ್ಯವ ಅರಿಯಲು
ಶಿಕ್ಷಣದಲಿ ಬೇಕಿದೆ ಸರಳತೆಯ ಮೆಟ್ಟಿಲು;
ಸರ್ಕಾರಿ ಶಾಲೆ ಕಟ್ಟಿಹುದದನು ಸುತ್ತಲೂ!
– ಚಿದಾನಂದ್ ಎನ್ ಕೋಟ್ಯಾನ್
ಆಗಷ್ಟೇ ಭರತನಾಟ್ಯ ಕಾರ್ಯಕ್ರಮ ಮುಗಿಸಿ ವೇದಿಕೆ ಹಿಂಭಾಗದ ಡ್ರೆಸ್ಸಿಂಗ್ ರೂಮ್ ಪಕ್ಕದಲ್ಲಿ ಏಕಾಂತಚಿತ್ತಳಾಗಿ ಕುಳಿತಿದ್ದ ಸಹನಾಳ ದುಗುಡ ಮೊಗದಲ್ಲಿ ಅದೇನೋ ಕಳೆದುಕೊಂಡ ನಿರಾಶಾಭಾವವಿತ್ತು. ಭರತನಾಟ್ಯದ ಸಿಂಗಾರಗೊಂಡ ಆ ವೇಷಭೂಷಣವನ್ನು ಇನ್ನೂ ಬದಲಾಯಿಸದೆ ಒಂದೆಡೆ ಕುಳಿತಿದ್ದ ಅವಳ ರೀತಿಯು ಕಾರ್ಯಕ್ರಮ ನಿರೂಪಕನಾಗಿದ್ದ ನನ್ನನ್ನು ಪ್ರಶ್ನಿಸಿತು. ಇಲ್ಲಿ ಈಕೆ ವೇದಿಕೆ ಪ್ರವೇಶಿಸುವ ಮುನ್ನ ತನ್ನ ಗೆಳತಿ ಮೇಘನಾಳ ಸಿನೆಮಾ ಹಾಡಿನ ನೃತ್ಯ ವೀಕ್ಷಿಸಲು ಬಹಳವಾಗಿ ಸೇರಿದ್ದ ಜನ, ಭರತನಾಟ್ಯ ಶುರುವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದರು. ವರ್ಷಗಟ್ಟಲೆ ತರಬೇತಿ ಪಡೆದ ಈ ಶಾಸ್ತ್ರೀಯ ಹಿನ್ನೆಲೆಯುಳ್ಳ ಭರತನಾಟ್ಯಕ್ಕೆ ಸಿಗದ ಜನಮನ್ನಣೆ ಯಾವುದೇ ನೃತ್ಯ ಪ್ರಕಾರದ ಅರಿವಿಲ್ಲದೆಯೇ ಮಾಡುವ ಒಂದು ಸರಳ ನೃತ್ಯಕ್ಕೆ ಸಿಗುತ್ತಿದೆ ಎಂದಾದರೆ “ಯಾಕಿವೆಲ್ಲಾ?” ಎಂಬ ಕಠಿನ ಮರುಪ್ರಶ್ನೆಯು ಅವಳದಾಗಿತ್ತು.
ಬಸ್ ನಿಲ್ದಾಣದಲ್ಲಿ ತನ್ನ ದಾರಿಯ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಓರ್ವ ವ್ಯಕ್ತಿಗೆ ಅಲ್ಲೇ ಬಿದ್ದಿರುವ ಪೇಪರ್, ಪ್ಲಾಸ್ಟಿಕ್ ತರಹದ ಒಂದಿಷ್ಟು ಕಸವನ್ನು ಪಕ್ಕದಲ್ಲಿನ ಕಸದ ಬುಟ್ಟಿಗೆ ಹಾಕಿ ತಾನೂ “ಸ್ವಚ್ಛ ಭಾರತ”ದಲ್ಲಿ ತೊಡಗಬೇಕೆನ್ನುವ ಆಸಕ್ತಿ ಒಂದೆಡೆಯಾದರೆ .., ಅದನ್ನೇನಾದರೂ ಮಾಡಿದರೆ ತನ್ನ ಸುತ್ತಮುತ್ತ ನಿಂತಿರುವ ಜನ ಏನಂದುಕೊಳ್ಳುತ್ತಾರೋ ಅನ್ನುವ ಮುಜುಗರ ಇನ್ನೊಂದೆಡೆ… “ಕೃಷಿ ನಮಗೆ ಪಾರಂಪರಿಕವಾಗಿ ಬಂದ ಕಸುಬು, ಅದೇ ನನ್ನನ್ನು ವಿದ್ಯಾವಂತನನ್ನಾಗಿ ಮಾಡಿದೆ, ಪದವಿ ಶಿಕ್ಷಣ ಮುಗಿದ ನಂತರ ದೂರದ ನಗರ ಸಂಚರಿಸುವ ಬದಲು ಹಳ್ಳಿಯಲ್ಲೇ ಇದ್ದು ರೈತನಾಗುತ್ತೇನೆ” ಎನ್ನುವ ಅಪರೂಪದ ಆಲೋಚನೆ ಓರ್ವ ಯುವಕನಿಗೆ ಒಂದೆಡೆಯಾದರೆ.., ತಾನೊಬ್ಬ ಹಳ್ಳಿಯಲ್ಲೇ ಉಳಿದು ವ್ಯವಸಾಯವನ್ನು ಪ್ರಾರಂಭಿಸಿದರೆ ತನ್ನ ಕಾಲೇಜು ಸ್ನೇಹಿತರೆಲ್ಲ ಏನಂದುಕೊಳ್ಳುತ್ತಾರೋ ಎನ್ನುವ ಅಂಜಿಕೆ ಇನ್ನೊಂದೆಡೆ…