
ಅಂದು ಮಾಘಿಯ ಚಳಿಯ ತೀವ್ರತೆ ಎಷ್ಟಿರುತ್ತಿತ್ತೆಂದರೆ ನರನಾಡಿಗಳೆಲ್ಲ ಮರಗಟ್ಟಿ, ರಕ್ತ ಹೆಪ್ಪುಗಟ್ಟುವಂತಿರುತಿತ್ತು. ಆರಡಿ ದೂರದಲ್ಲಿ ಯಾರಾದರೂ ನಿಂತಿದ್ದರೂ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗದಷ್ಟು ದಟ್ಟವಾಗಿ ಮಂಜು ಬೀಳುತ್ತಿತ್ತು. ಆಗೊಮ್ಮೆ ಈಗೊಮ್ಮೆ ಕುಳಿರ್ಗಾಳಿ ಬೀಸುವಾಗ ಮಂಜಿನೊಂದಿಗೆ ಚಳಿಯು ಮಾಯವಾಗಿ ಶಾಖವು ಮೈ ಸೋಕಿದಾಗ ಅದೇನೋ ಅವ್ಯಕ್ತ ಆನಂದವುಂಟಾಗುತ್ತಿತ್ತು. ಅಂತಹ ಚಳಿಯಲ್ಲೂ ಆಹಾರ ಹುಡುಕಲು ಹೊರಡುತ್ತಿದ್ದ ಹಕ್ಕಿಗಳ ಕಲರವವನ್ನು ಕೇಳುವುದೇ ಒಂದು ಅದ್ಭುತವಾದ ಅನುಭವ! ನಾನೂ ಬೆಳಗ್ಗೆ ಬೇಗ ಏಳುತ್ತಿದ್ದೆ, ಮನೆಯಲ್ಲಿ ಹೆಣ್ಣುಮಕ್ಕಳಿಲ್ಲದಿದ್ದುದರಿಂದ ಅಂಗಳದ ಕಸ ಗುಡಿಸುವ ಕಾಯಕ ನನ್ನ ಪಾಲಿಗೇ ಬಿದ್ದಿತ್ತು. ಪ್ರತಿದಿನ ಮುಂಜಾನೆ ಕಸಗುಡಿಸುವಾಗಲೂ ತಲೆಯ ಮೇಲಿಂದ ಕ್ರರ್ ಕ್ರರ್ ಸದ್ದು ಮಾಡುತ್ತಾ ಕೊಕ್ಕರೆಗಳ ಗುಂಪು ಹಾರಿ ಹೋಗುತ್ತಿತ್ತು. ಬೆಳ್ಳಕ್ಕಿಗಳ ಈ ಹೆಜ್ಜೆ ಮೂಡದ ಹಾದಿ ನನ್ನ ಕುತೂಹಲವನ್ನು ತೀವ್ರವಾಗಿ ಕೆರಳಿಸಿತ್ತು. ಪ್ರತಿದಿನ ಸಂಜೆ ಶಾಲೆಯಿಂದ ಹಿಂದಿರುಗಿದ ಮೇಲೆ ಬುಡಮೇಲಾದ ಗೇರು ಮರದ ಮೇಲೆ ಕುಳಿತು ಅವುಗಳ ಹಾರಾಟವನ್ನು ಗಮನಿಸೋದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದಾಗಿ ಬಿಟ್ಟಿತ್ತು. ಒಂದು ಸಾಮಾನ್ಯ ಬಕಪಕ್ಷಿಯಲ್ಲಿ ಅಂತದ್ದೇನು ವಿಶೇಷವಿದ್ದಿರಬಹುದು? ಎಂದು ನೀವು ಯೋಚಿಸಬಹುದು..!