ದಾಸ್ಯ-ಸ್ವಾತಂತ್ರ್ಯ-ಸ್ವೇಚ್ಛೆ…

swatantra
ಸ್ವಾತಂತ್ರ್ಯದ ಹಿಂದೆ ಹಲವಾರು ದೇಶಭಕ್ತರ ನೆತ್ತರ ತರ್ಪಣವಿದೆ. ಹೆಸರೇ ಹೇಳಲಿಚ್ಚಿಸದ ಅನಾಮಿಕ ಹೋರಾಟಗಾರರ ಮತ್ತು ಅವರ ಕುಟುಂಬದವರ ಅದ್ವಿತೀಯ ಛಲವಿದೆ, ಬಲವಿದೆ. ಶಾಂತಿ, ಅಹಿಂಸೆ, ಪ್ರತಿಭಟನೆ, ತ್ಯಾಗ, ಬಲಿದಾನ ಇವೆಲ್ಲದರ ಮಿಳಿತವಿದೆ…

             ಮಳೆಯ ಪ್ರಮಾಣ ಹೆಚ್ಚು-ಕಡಿಮೆಯಾದರೆ ಅತಿವೃಷ್ಟಿ-ಅನಾವೃಷ್ಟಿಗಳು ಉಂಟಾಗುತ್ತವೆ. ಹಾಗೆಯೇ ಸ್ವತಂತ್ರ್ಯತೆಯ ಏರಿಳಿತವೂ ದಾಸ್ಯ ಮತ್ತು ಸ್ವೇಚ್ಛೆಯನ್ನು ಸೃಷ್ಟಿ ಮಾಡುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ನಿಜ, ಆದರೆ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸ್ವಾತಂತ್ರ್ಯ ಸಿಕ್ಕಿದೆಯೇ? ನಿಜವಾಗಿಯೂ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರನಾಗಿ ಬಾಳ್ವೆ ನಡೆಸುತ್ತಿದ್ದಾನೆ ಎಂದಾದಲ್ಲಿ ಜೀತ ಪದ್ಧತಿ, ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿರುವುದೇಕೆ?

             ಮಹಾತ್ಮ ಗಾಂಧೀಜಿಯವರ ಹೇಳಿಕೆಯಂತೆ ನಡುರಾತ್ರಿ ಮಹಿಳೆಯೊಬ್ಬಳು ನಿರ್ಭೀತಿಯಿಂದ ನಡೆದಾಡುವಂತಾದರೆ ಅದೇ ಸ್ವಾತಂತ್ರ್ಯ. ಹಾಡುಹಗಲೇ ಪುಟ್ಟ ಬಾಲಕಿಯಿಂದ ಹಿಡಿದು ವೃದ್ಧೆಯವರೆಗೂ ಅತ್ಯಾಚಾರ ನಡೆಯುತ್ತಿರುವಾಗ ನಡುರಾತ್ರಿಯ ಮಾತೆಲ್ಲಿ? ಇದಕ್ಕೆ ಅಪವಾದ ಎಂಬಂತೆ ಸ್ವೇಚ್ಛೆಯಿಂದ ಬಾಳ್ವೆ ನಡೆಸುವವರೂ ಇದ್ದಾರೆ.

             ತ್ಯಾಗ,ಶಾಂತಿ ಮತ್ತು ಸಮೃದ್ಧಿಯ ಕುರುಹಾಗಿ ಇರುವ ಕೇಸರಿ,ಬಿಳಿ,ಹಸಿರಿನ ಬಾವುಟ ಇಂದು ಹಿಂದು,ಕ್ರೈಸ್ತ ಮತ್ತು ಮುಸಲ್ಮಾನರ ಧರ್ಮಗಳ ಪ್ರತ್ಯೇಕ ಸಂಕೇತವೆಂಬಂತೆ ಆಯಾ ಧರ್ಮಗಳ ಮುಖಂಡರಿಂದ ಬಿಂಬಿತವಾಗುತ್ತಿದೆ.ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆ ಮೀರುತ್ತಿರುವಂತೆ ಭಾಸವಾಗುವುದಿಲ್ಲವೇ..?

             ಸ್ವಾತಂತ್ರ್ಯ ಸಿಕ್ಕಿದೆ ಎಂಬುದಕ್ಕೆ ಆಡಂಬರದ ಅವಶ್ಯಕತೆ ಇಲ್ಲ. ಅದು ಸರಳವಾಗಿ, ಸಾಂಕೇತಿಕವಾಗಿ ದೇಶಭಕ್ತಿಯ ಪ್ರತೀಕವಾಗಿ ಬಿಂಬಿತವಾದರಷ್ಟೇ ಚೆನ್ನ. ಸ್ವಾತಂತ್ರ್ಯದ ಹಿಂದೆ ಹಲವಾರು ದೇಶಭಕ್ತರ ನೆತ್ತರ ತರ್ಪಣವಿದೆ. ಹೆಸರೇ ಹೇಳಲಿಚ್ಚಿಸದ ಅನಾಮಿಕ ಹೋರಾಟಗಾರರ ಮತ್ತು ಅವರ ಕುಟುಂಬದವರ ಅದ್ವಿತೀಯ ಛಲವಿದೆ, ಬಲವಿದೆ. ಶಾಂತಿ, ಅಹಿಂಸೆ, ಪ್ರತಿಭಟನೆ, ತ್ಯಾಗ, ಬಲಿದಾನ ಇವೆಲ್ಲದರ ಮಿಳಿತವಿದೆ. ಸ್ವಾತಂತ್ರ್ಯದ ಸದುಪಯೋಗಪಡಿಸಿಕೊಂಡು ಸ್ವತಂತ್ರವಾಗಿಯೇ ಬದುಕೋಣ. ದಾಸ್ಯದ ಸಂಕೋಲೆಯಲ್ಲಿ ಬಂಧಿಯಾಗಿಯೂ ಅಲ್ಲ, ಸ್ವೇಚ್ಛಾಚಾರಿಗಳಾಗಿಯೂ ಅಲ್ಲ.

~ವಿಭಾ ವಿಶ್ವನಾಥ್

vibhavishwanath96@gmail.com

ವಿಭಾ ವಿಶ್ವನಾಥ್ @ facebook

ಭುವಿಯ ಭಾವಯಾನ

 

ಆಧುನಿಕ ಹರಿಶ್ಚಂದ್ರ

Adhunika harishchandra
“ಅವರು ಹಾಗಂದರೆ… ಇವರು ಹೀಗಂದರೆ… ನಮಗೆ ತೊಂದರೆಯಾದರೆ..” ಎಂಬೆಲ್ಲಾ ಕಾರಣಗಳನ್ನು ಕೊಟ್ಟು ದೊಡ್ಡವರಾದ ನಾವುಗಳೇ ಹಿಂಜರಿಯುವ ಹೊತ್ತಿನಲ್ಲಿ ಈ ಕಿರುಕಥೆ ಸತ್ಯ ಹೇಳಲು, ಒಳ್ಳೆಯದ್ದನ್ನು ಮಾಡಲು ಸ್ಪೂರ್ತಿ ನೀಡುವಂತಿದೆ..
ಇನ್ನಾದರೂ ಬದಲಾಗೋಣ, ಅಷ್ಟಲ್ಲವಾದರೂ, ಸ್ವಲ್ಪ..

             ಮಗನಿಗೆ “ಸುಳ್ಳು ಹೇಳಬಾರದು,ಸತ್ಯವನ್ನೇ ಹೇಳಬೇಕು ” ಎಂದು ಪ್ರೇರೇಪಿಸಿ ಬೆಳೆಸಿದ್ದೇ ತಪ್ಪಾಯಿತೇ? ಎಂಬ ಯೋಚನೆಯಲ್ಲಿದ್ದ ನೀಲಾಳನ್ನು ಮಗನೇ ಎಚ್ಚರಿಸಿದ್ದ.

             ಸುಮಾರು ವರ್ಷಗಳು ಮಕ್ಕಳೇ ಆಗದೇ ಹತಾಶೆಯಲ್ಲಿದ್ದ ನೀಲಾ-ಸಂತೋಷರಿಗೆ ದೇವರೇ ವರ ನೀಡಿದಂತೆ ಮುದ್ದಿನ ಮಗನಾಗಿ ಮಡಿಲು ತುಂಬಿದ್ದ ಅನಾಥ ಮಗು ಇವನು. ಸತ್ಯ ಹರಿಶ್ಚಂದ್ರ ನಾಟಕ ನೋಡಿಕೊಂಡು ಬರುತ್ತಿರುವಾಗ ಸಿಕ್ಕ ಮಗುವನ್ನು ಇಬ್ಬರೂ ಆದರ್ಶದಿಂದ ತಮ್ಮದೇ ಮಗುವೆಂಬಂತೆ ಬೆಳೆಸಿದ್ದರು, ಜೊತೆಗೆ ಹರಿಶ್ಚಂದ್ರ ಎಂಬ ಹೆಸರನ್ನೇ ಇಟ್ಟಿದ್ದರು. ಅವನೂ ಅಷ್ಟೆ, ಸತ್ಯ ಹರಿಶ್ಚಂದ್ರ ನನ್ನೇ ಆದರ್ಶವನ್ನಾಗಿಟ್ಟುಕೊಂಡಿದ್ದರೂ, ಆಧುನಿಕ ಯುವಕರಂತೆ ನಡೆ-ನುಡಿ,ಧೈರ್ಯ-ಸ್ಥೈರ್ಯ ಅಷ್ಟೇ ಅಲ್ಲದೆ, ಕ್ರೀಡೆಯಲ್ಲೂ ಮುಂದಿದ್ದ. ಮಗನ ಆ ಎಲ್ಲಾ ಗುಣಗಳಿಗೇ ಮೆಚ್ಚಿಕೊಂಡಿದ್ದ ನೀಲಾಳಿಗೆ ಇಂದು ಆ ಗುಣಗಳೇ ಆತಂಕಕ್ಕೆ ಕಾರಣವಾಗಿದ್ದವು. ಆದದ್ದಿಷ್ಟು,ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಚೆನ್ನಾಗಿ ತಯಾರಾಗಿ ಹೋಗಿದ್ದ ಮಗ ಆಲ್ಲಿ ನಡೆದ ಸಾಮೂಹಿಕ ನಕಲನ್ನು ನೋಡಿ ಕೆಂಡಾಮಂಡಲವಾಗಿದ್ದ. ಓದಿದವರಿಗೂ, ಓದದವರಿಗೂ ಒಂದೇ ಎಂಬಂತೆ ಮಾಡಿದ್ದ ಆ ಇಡೀ ಅವ್ಯವಸ್ಥೆಯ ಕುರಿತು ಟಿ.ವಿ ಗೆ ಹೇಳಿಕೆ ನೀಡಿ ಸಾಮೂಹಿಕ ವಲಯದಲ್ಲೇ ಆ ಕುರಿತ ಚರ್ಚೆಯಾಗುವಂತೆ ಮಾಡಿದ್ದ.ಈ ಕುರಿತಂತೆ ಮಗನಿಗೆ ಬರುತ್ತಿದ್ದ ಜೀವ ಬೆದರಿಕೆ ಕರೆಗಳೇ ಅವಳ ಆತಂಕಕ್ಕೆ ಕಾರಣ.

             ಇದನ್ನು ಕುರಿತು ಮಗ ಅಮ್ಮನಿಗೆ ಹೇಳಿದ್ದು ಒಂದೇ ಮಾತುಗಳೊಂದಿಗೆ “ನೂರು ದಿನ ಸತ್ಯ ಮುಚ್ಚಿಟ್ಟು ಇಲಿಯಂತೆ ಬದುಕುವುದಕ್ಕಿಂತ, ಮೂರು ದಿನ ಸತ್ಯ ಹೇಳಿ ಹುಲಿಯಂತೆ ಬದುಕುವುದೇ ಲೇಸು”, ಆದದ್ದಾಗಲಿ ಬಂದದ್ದನ್ನೆದುರಿಸುವೆನೆಂದಾಗ, ಒಂದರೆಕ್ಷಣ ನೀಲಾಳಿಗೆ, ಸತ್ಯ ಹರಿಶ್ಚಂದ್ರ ನೇ ಪುನರ್ಜನ್ಮವನ್ನೆತ್ತಿ ಬಂದಿರುವನೇನೋ ಎನ್ನಿಸಿಬಿಟ್ಟಿತು.

✒~ವಿಭಾ ವಿಶ್ವನಾಥ್

vibhavishwanath96@gmail.com

ವಿಭಾ ವಿಶ್ವನಾಥ್ @ facebook

ಭುವಿಯ ಭಾವಯಾನ