
– ಪ್ರಿಯಶ್ರೀ
– ಪ್ರಿಯಶ್ರೀ
– ಚಿದಾನಂದ್ ಎನ್ ಕೋಟ್ಯಾನ್
ಅದು ರೈಲ್ವೇ ನಿಲ್ದಾಣದ ಟಿಕೆಟ್ ಕೌಂಟರ್. ಟಿಕೆಟ್ ಪಡೆಯುತ್ತಲೇ ಆ ಯುವಕ ನೀಡಿದ್ದ ಡೆಬಿಟ್ ಕಾರ್ಡನ್ನು ಕಛೇರಿಯೊಳಗಿದ್ದಾಕೆ ನಿರಾಕರಿಸಿ ಕ್ಯಾಶ್ ನೀಡುವಂತೆ ಒತ್ತಾಯಿಸಿದಳು. ಸ್ವೈಪಿಂಗ್ ಮೆಶಿನ್ ನೆಟ್ವರ್ಕ್ ಕೆಟ್ಟಿದ್ದರಿಂದ ಆತನಿಗೆ ಕ್ಯಾಶ್ ನೀಡುವುದು ಅನಿವಾರ್ಯವೇ ಆಗಿತ್ತು. ಆತ ಸುಮ್ಮನಾಗಲಿಲ್ಲ. ಅಲ್ಲಿದ್ದಿದ್ದು ಹೆಣ್ಣೆಂಬ ಗಣನೆಯೂ ಇಲ್ಲದೇ ವೈಯಕ್ತಿಕವಾಗಿ ನಿಂದಿಸುತ್ತಲೇ ಕಿರುಚಾಡಿದ ಆತ, “ಸಿಸ್ಟಮ್ ನ ಸರಿ ಇಲ್ದಿದ್ರೆ ಅದು ನಿಮ್ ಪ್ರಾಬ್ಲೆಮ್ ರೀ, ನಮ್ಗ್ಯಾಕೆ ಪ್ರಾಬ್ಲೆಮ್ ಕೊಡ್ತೀರಾ, ಇಷ್ಟಕ್ಕೂ ನಮ್ ದುಡ್ಡಿಂದಲೇ ನೀವುಗಳು ಸಂಬಳ ತಗೋತಿದ್ದೀರಾ ನೆಂಪಿಟ್ಕೊಳ್ಳಿ” ಎನ್ನುತ್ತ ರ‍್ಯಾಶ್ ನಲ್ಲೇ ಕ್ಯಾಶ್ ನೀಡಿ ಹೊರಟ. ತನ್ನದಲ್ಲದ ತಪ್ಪಿಗೆ, ತನಗರಿಯದ ಜವಾಬ್ದಾರಿಗೆ ಅವಮಾನದ ಮಾತುಗಳನ್ನೇ ಕೇಳಬೇಕಾದ ಆಕೆ ಕಣ್ಣೀರಿಡುವುದೊಂದೇ ಬಾಕಿ.
ಅವ್ಯವಸ್ಥೆಯ ಕುರಿತಾಗಿ ಕಿಡಿಕಾರುವುದು ನಮ್ಮಲ್ಲಿ ಸರ್ವೇಸಾಮಾನ್ಯವಾದಂತೆಯೇ ಮೇಲಿನ ಸನ್ನಿವೇಶದಲ್ಲಿನ ಆವೇಶವೂ ಸಹಜವೇ. ಆದರೆ ಅದು ಬ್ಯಾಂಕ್ ಅಥವಾ ಹಠಾತ್ತಾಗಿ ಆಗುವ ನೆಟ್ವರ್ಕಿಂಗ್ ಗೆ ಸಂಬಂಧಿಸಿದ ಸಮಸ್ಯೆಯಾದ್ದರಿಂದ ಅಲ್ಲಿ ಕಂಪ್ಯೂಟರ್ ಮುಂದೆ ಕೂತು ಟಿಕೆಟ್ ನೀಡುವವರನ್ನು ನಿಂದಿಸುವುದರಲ್ಲಿ ಅದೇನು ಪ್ರಯೋಜನವೋ? ಆತ ಅಂದುಕೊಂಡಂತೆ ಗ್ರಾಹಕರ ಹಣದಿಂದಲೇ ಆ ಸಂಸ್ಥೆಯ ದುಡಿಮೆಗಾರರಿಗೆ ಸಂಬಳ ನೀಡಿದ್ದಿರಬಹುದು. ಆದರೆ ಅವರೆಲ್ಲರ ದುಡಿಮೆಯಿಂದಲೇ ಆ ಗ್ರಾಹಕರೆಲ್ಲರೂ ರೈಲಿನಲಿ ಸುಗಮವಾಗಿ ಸಂಚರಿಸಿರುವಾಗ ಅದೊಂದು ‘ನೆಟ್ವರ್ಕ್’ ರೀತಿಯ ಪ್ರಕ್ರಿಯೆಯಲ್ಲವೆ. ಅದುವೇ ಕುಟುಂಬ. ಇಂತಹ ಹಲವು ಸಂಪರ್ಕ ಸಾಧನದಿಂದಲೇ ದೇಶವೆಂಬುದನ್ನು ಅರಿಯಬೇಕಿದೆ.
ತನ್ನ ಬಹುಪಾಲು ಸೌಖ್ಯವು ಪರೋಕ್ಷವಾದ ಅವೆಷ್ಟೋ ಜನ ಶ್ರಮಿಕರ ಪರಿಣಾಮವೆಂದು ಅರಿತಾಗ ಈ ಜಗವೇ ಒಂದು ಕುಟುಂಬದಂತೆ ಕಾಣುವುದು. ಪ್ರತಿಯೊಂದು ದುಡಿಮೆಯು ನಾನಾ ರೂಪದಲ್ಲಿ ಪ್ರತಿಯೊಬ್ಬರನ್ನು ಸಂಧಿಸುವುದು. ಈ ದೇಶದ ಜಿಡಿಪಿಯಿಂದ ಹಿಡಿದು ಎಲ್ಲಾ ಏಳ್ಗೆಗೂ ನಿಸರ್ಗವೇ ಮೂಲ, ಕೃಷಿಕ-ಶ್ರಮಿಕ-ಶಿಕ್ಷಕ-ಸೈನಿಕ ಇವರುಗಳೇ ಸಾರ್ವಕಾಲಿಕ ಶಕ್ತಿಯೆಂಬುದನ್ನು ತಂತ್ರಜ್ಞಾನವೆಷ್ಟೇ ಬಂದರೂ ಮರೆಯಲಾಗದು. ಈ ನಾಲ್ಕು ವಿಭಾಗಗಳಿಗೆ ಘನತೆ, ಮಾನ್ಯತೆ ನೀಡುವುದು ನಮ್ಮೊಳಗಿನ ಸಂಸ್ಕಾರವಾಗಬೇಕು. ಇಂದು ವ್ಯಾಪಕವಾಗಿರುವ “ಟ್ರೆಂಡ್” ಎಂಬ ಕುರುಡು ವ್ಯಾಮೋಹವು ದೇಶದ ಭವಿಷ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರದಂತೆ ಎಚ್ಚರವಹಿಸಬೇಕಿದೆ.
ದೇಶ ಭಕ್ತರಾಗುವುದು ಧ್ವಜಕ್ಕೆ ಸೆಲ್ಯೂಟ್ ಹೊಡೆದ ಅಥವಾ ರಾಷ್ಟ್ರಗೀತೆ ಹಾಡಿದ ಅಥವಾ ರಾಷ್ಟ್ರೀಯತೆ ಬಗ್ಗೆ ನಾನಾ ಆಯಾಮ ಕಲ್ಪಿಸಿ ಮಾತನಾಡಿದ ಕಾರಣದಿಂದಲ್ಲ. ದೇಶದೊಳಗೆಲ್ಲರೂ ಸಮಾನರೆಂಬ ಸಾಮಾಜಿಕ ನ್ಯಾಯದೊಂದಿಗೆ, ಎಲ್ಲರೊಳಗೊಂದಾಗಿ ಕುಟುಂಬದಂತೆ ಬದುಕುವ ಸ್ಪಂದನೆಯ ಭಾವದೊಳಗಿದೆ ದೇಶಭಕ್ತಿ. ಪ್ರಾಮಾಣಿಕವಾಗಿ ದುಡಿಯುವಾತ ದೇಶಭಕ್ತಿಯ ವಿಚಾರದಲ್ಲಿ ಯಾವುದೇ ಭಾವ ಪ್ರದರ್ಶಿಸದಿದ್ದ ಮಾತ್ರಕ್ಕೆ ಆತ ದೇಶ ವಿರೋಧಿಯಾಗಲಾರ, ಆತನೇ ಭಾರತಾಂಬೆಗೆ ಪ್ರಿಯ. ಆದ್ದರಿಂದ ಶ್ರಮಿಕರನ್ನು ಗೌರವಿಸುವುದೇ ಒಂದು ದೇಶಭಕ್ತಿ. ಅದುವೇ ದೇಶವನ್ನು ಬದಲಾಯಿಸಬಲ್ಲದು.
ಮೇಲೆ ಆತ ಮಾಡಿದ ರೀತಿಯಲ್ಲಿ ಯಾರದ್ದೋ ತಪ್ಪಿಗೆ ಇನ್ಯಾರನ್ನೋ ನಿಂದಿಸಿ ಜಗಳವಾಡಿದಂತೆ ಅಪ್ರಯೋಜಕ ವೈಚಾರಿಕ ಕಲಹಗಳು ಸಾಮರಸ್ಯಕ್ಕೊಂದು ತಿರುಗುಬಾಣವಾಗಿದೆ. ಈ ದೇಶದ ಆಡಳಿತಾತ್ಮಕ ಹಿತಾಸಕ್ತಿ ಅಥವಾ ಇನ್ಯಾವುದರಿಂದಲೋ ಋಣಾತ್ಮಕವಾಗಿ ತಿರುಗುವ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳು, ಜನಸಾಮಾನ್ಯರಲ್ಲಿ ಚರ್ಚೆ, ಕುಹಕ, ಘರ್ಷಣೆಗಳಾಗಿ ಭಾವೋದ್ವೇಗಕ್ಕೊಳಗಾಗುವ ಮತ್ತು ಪ್ರಯೋಜನಕ್ಕೇ ಬಾರದೆ ವ್ಯತಿರಿಕ್ತವಾಗುವ ಹಲವು ವೈಚಾರಿಕ ದ್ವಂದ್ವಗಳಿವೆ. ಅವು ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುತ್ತಲೇ ಇವೆ.
ಈ ದೇಶದೊಳಗಿನ ಸಿದ್ಧಾಂತಗಳೇ ದಂದ್ವ ಎನ್ನುವಷ್ಟರಟ್ಟು ಮಟ್ಟಿಗೆ ನಾವಿದ್ದೇವೆ. ದಶಕದ ಆಚೆಗೆ ಈ ಸಮಸ್ಯೆಯಿರಲಿಲ್ಲ. ಈ ಫೇಸ್‌ಬುಕ್ ಬಂತು ನೋಡಿ, ಹಲವು ಸಿದ್ಧಾಂತದ ಅಭಿಪ್ರಾಯಗಳು ಅಭಿವ್ಯಕ್ತಿಯಾಗಿ ಒಂದೆಡೆ ಸೇರಿ ಎಡ-ಬಲವೆಂಬ ಸಂಘರ್ಷ ಮಿತಿ ಮೀರಿ ಹೋಗಿಯಾಯಿತು. ಈ ಕಡೆ ವ್ಯವಹಾರಿಕ ಸುದ್ದಿ ಮಾಧ್ಯಮಗಳ ಅಬ್ಬರವನ್ನಂತೂ ಕೇಳಬೇಕೆ. ಬಹುತೇಕ ಎಲ್ಲಾ ವಿಚಾರಗಳಲ್ಲೂ ಯಾರೋ ಕೆಲವರು ಪ್ರಚಾರದ ತೆವಲು, ವೈಯಕ್ತಿಕ ಹಿತಾಸಕ್ತಿಗೋಸ್ಕರ ಪ್ರಸ್ತಾಪಿಸುವ ವಿಚಾರಗಳನ್ನೇ ಸಾರ್ವಜನಿಕ ಅಭಿಪ್ರಾಯ ಎಂಬಂತೆ ಇಂದಿನ ಸಮೂಹ ಮಾಧ್ಯಮಗಳು ಬಿಂಬಿಸುತ್ತಿವೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ‘ಮಾತಾಡೋನೇ ಮಹಾಶೂರ’ನಾಗಿಬಿಟ್ಟಿದ್ದಾನೆ. ಮನಸ್ಸಿಗೆ ಮಸಾಲೆ ತುಂಬಿದರಷ್ಟೇ ಸಾಕು ಅದು ಸಮಾಜದ ಸ್ವಾಸ್ಥ್ಯ, ದೇಶದ ಹಿತ ಎಲ್ಲವನ್ನೂ ಮೀರಿ ಬಹುಜನರ ಅಭಿಪ್ರಾಯವಾಗಿ ಕೊನೆಗೆ ಅದೇ ಗ್ರಾಂಥಿಕ ನಿಲುವೆಂಬತಾಗುತ್ತದೆ.
ಈಗಿನ ಪಂಥೀಯ ಸಮರಕ್ಕೆ ವೇದಿಕೆಯಂತಾಗಿರುವ ಫೇಸ್ಬುಕ್, ಸುದ್ದಿವಾಹಿನಿಗಳನ್ನು ನೋಡ್ತಿದ್ರೆ ಹೊರಗೆ ಎಷ್ಟೊಂದು ಪ್ರಕ್ಷುಬ್ಧ ಪರಿಸ್ಥಿತಿ ಇರಬಹುದು ಅಂತ ಆತಂಕವಾಗಬೇಕು. ಹೊರಗೆ ಬಂದರೆ ಎಡ-ಬಲ, ಬಿಜೆಪಿ-ಕಾಂಗ್ರೆಸ್, ಹಿಂದೂ-ಮುಸ್ಲಿಂ ಯಾವುದೂ ಇಲ್ಲ. ನಮ್ಮ ಜಾತಿಯವರ ಅಂಗಡೀಲೇ ವ್ಯಾಪಾರ ಮಾಡಬೇಕು ಅಂತ ಯಾರೂ ಮಾತಾಡ್ತಿಲ್ಲ. ಒಂದು ಮುಸ್ಲಿಂ ಕುಟುಂಬ ಅಯ್ಯಂಗಾರ್ ಬೇಕರಿಯಲ್ಲಿ ಆರಾಮಾಗಿ ಅದೇನೋ ತಿಂತಾ ಇದ್ದಾರೆ. ಲಕ್ಷಾಂತರ ಜನಸಾಮಾನ್ಯರು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಯಾರ ಮೇಲೂ ಯಾರಿಗೂ ದ್ವೇಷವಿದ್ದಂತೆ ಕಾಣಿಸುತ್ತಿಲ್ಲ. ಇಲ್ಲಿ ಎಲ್ಲವೂ ಸೃಷ್ಟಿ, ಎಲ್ಲವೂ ದ್ವಂದ್ವ.
ಈ ರೀತಿ ಈ ದೇಶದ ಆಡಳಿತದೊಳಗಿನ ರಾಜಕಾರಣ ಮತ್ತು ಹಲವು ವ್ಯವಹಾರಿಕ ಸ್ವಹಿತಾಸಕ್ತಿಗಳು ಸೃಷ್ಟಿಸುವ ಅವಾಂತರಗಳು ಜನರ ದಿಕ್ಕು ತಪ್ಪಿಸಿದ ಪರಿಣಾಮ, ವಿಭಾಗಗಳು ಅತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ನಾವು ನಾವುಗಳು ಕಚ್ಚಾಡುವಂತಾಗಿರುವುದು ದೇಶದ ಭವಿಷ್ಯಕ್ಕಂತೂ ಒಳಿತಲ್ಲ. ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮೆಲುಕು ಹಾಕಿದರಷ್ಟೇ ಸಾಲದು, ಸ್ವತಂತ್ರ ಭಾರತವನ್ನು ಸ್ವಾಸ್ಥ್ಯದಿಂದ ಮುನ್ನಡೆಸುವುದೇ ವಾಸ್ತವದ ಹೊಣೆಗಾರಿಕೆ ಮತ್ತು ಸೇವೆ. ಚಲಿಸುವ ಕಾರು ಬಿಟ್ಟು ಕೀಕೀ ಡ್ಯಾನ್ಸ್ ಮಾಡುವುದನ್ನು ಟ್ರೆಂಡ್ ಆಗಿಸುವ ಬದಲು, ಅದೇನಾದರೂ ಒಂದು ಗಿಡ ನೆಟ್ಟು ದೇಸೀ ನಾಟ್ಯ ಮಾಡುವ ಟ್ರೆಂಡ್ ಬರಿಸಿದರೆ ಅದುವೇ ಈ ದೇಶದೊಳಗಿನ ಕ್ರಾಂತಿ.
ಕೊನೆಯದಾಗಿ, ದೇಶಪ್ರೇಮವು ಮರೆಯಾಗುತ್ತಿರುವ ನಮ್ಮ ಸ್ವಂತಿಕೆಯ ದೇಸೀತನವನ್ನು ಉಳಿಸಿ ಬೆಳೆಸುವುದರಲ್ಲಿದೆ. ಪ್ರಾಮಾಣಿಕ ದುಡಿಮೆಯಲ್ಲಿದೆ. ಎಲ್ಲರನ್ನೂ, ಎಲ್ಲಾ ದುಡಿಮೆಯನ್ನೂ ಸಮಾನಾಗಿ ಕಾಣುವಲ್ಲಿದೆ. ಈ ದೇಶದ ಕಾನೂನು, ಒಕ್ಕೂಟ ವ್ಯವಸ್ಥೆಯನ್ನರಿತು ಬಾಳುವುದರಲ್ಲಿದೆ. ಉತ್ತಮ ಸಂಸ್ಕಾರದಲ್ಲಿದೆ. ವಿದ್ಯೆಯಲ್ಲಿದೆ. ಸತ್ವಯುತ, ಬೌದ್ಧಿಕ ಆಲೋಚನೆಯಲ್ಲಿದೆ. ಒಟ್ಟಿನಲ್ಲಿ ಅದು ಕ್ರಿಯೆಯಲ್ಲಿದೆ.
ಸ್ವಾತಂತ್ರ್ಯೋತ್ಸವದ ಶುಭಾಶಯಗಳೊಂದಿಗೆ,
– ಚಿದಾನಂದ್ ಎನ್ ಕೋಟ್ಯಾನ್
ಮಳೆಯ ಪ್ರಮಾಣ ಹೆಚ್ಚು-ಕಡಿಮೆಯಾದರೆ ಅತಿವೃಷ್ಟಿ-ಅನಾವೃಷ್ಟಿಗಳು ಉಂಟಾಗುತ್ತವೆ. ಹಾಗೆಯೇ ಸ್ವತಂತ್ರ್ಯತೆಯ ಏರಿಳಿತವೂ ದಾಸ್ಯ ಮತ್ತು ಸ್ವೇಚ್ಛೆಯನ್ನು ಸೃಷ್ಟಿ ಮಾಡುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ನಿಜ, ಆದರೆ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸ್ವಾತಂತ್ರ್ಯ ಸಿಕ್ಕಿದೆಯೇ? ನಿಜವಾಗಿಯೂ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರನಾಗಿ ಬಾಳ್ವೆ ನಡೆಸುತ್ತಿದ್ದಾನೆ ಎಂದಾದಲ್ಲಿ ಜೀತ ಪದ್ಧತಿ, ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿರುವುದೇಕೆ?
ಮಹಾತ್ಮ ಗಾಂಧೀಜಿಯವರ ಹೇಳಿಕೆಯಂತೆ ನಡುರಾತ್ರಿ ಮಹಿಳೆಯೊಬ್ಬಳು ನಿರ್ಭೀತಿಯಿಂದ ನಡೆದಾಡುವಂತಾದರೆ ಅದೇ ಸ್ವಾತಂತ್ರ್ಯ. ಹಾಡುಹಗಲೇ ಪುಟ್ಟ ಬಾಲಕಿಯಿಂದ ಹಿಡಿದು ವೃದ್ಧೆಯವರೆಗೂ ಅತ್ಯಾಚಾರ ನಡೆಯುತ್ತಿರುವಾಗ ನಡುರಾತ್ರಿಯ ಮಾತೆಲ್ಲಿ? ಇದಕ್ಕೆ ಅಪವಾದ ಎಂಬಂತೆ ಸ್ವೇಚ್ಛೆಯಿಂದ ಬಾಳ್ವೆ ನಡೆಸುವವರೂ ಇದ್ದಾರೆ.
ತ್ಯಾಗ,ಶಾಂತಿ ಮತ್ತು ಸಮೃದ್ಧಿಯ ಕುರುಹಾಗಿ ಇರುವ ಕೇಸರಿ,ಬಿಳಿ,ಹಸಿರಿನ ಬಾವುಟ ಇಂದು ಹಿಂದು,ಕ್ರೈಸ್ತ ಮತ್ತು ಮುಸಲ್ಮಾನರ ಧರ್ಮಗಳ ಪ್ರತ್ಯೇಕ ಸಂಕೇತವೆಂಬಂತೆ ಆಯಾ ಧರ್ಮಗಳ ಮುಖಂಡರಿಂದ ಬಿಂಬಿತವಾಗುತ್ತಿದೆ.ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆ ಮೀರುತ್ತಿರುವಂತೆ ಭಾಸವಾಗುವುದಿಲ್ಲವೇ..?
ಸ್ವಾತಂತ್ರ್ಯ ಸಿಕ್ಕಿದೆ ಎಂಬುದಕ್ಕೆ ಆಡಂಬರದ ಅವಶ್ಯಕತೆ ಇಲ್ಲ. ಅದು ಸರಳವಾಗಿ, ಸಾಂಕೇತಿಕವಾಗಿ ದೇಶಭಕ್ತಿಯ ಪ್ರತೀಕವಾಗಿ ಬಿಂಬಿತವಾದರಷ್ಟೇ ಚೆನ್ನ. ಸ್ವಾತಂತ್ರ್ಯದ ಹಿಂದೆ ಹಲವಾರು ದೇಶಭಕ್ತರ ನೆತ್ತರ ತರ್ಪಣವಿದೆ. ಹೆಸರೇ ಹೇಳಲಿಚ್ಚಿಸದ ಅನಾಮಿಕ ಹೋರಾಟಗಾರರ ಮತ್ತು ಅವರ ಕುಟುಂಬದವರ ಅದ್ವಿತೀಯ ಛಲವಿದೆ, ಬಲವಿದೆ. ಶಾಂತಿ, ಅಹಿಂಸೆ, ಪ್ರತಿಭಟನೆ, ತ್ಯಾಗ, ಬಲಿದಾನ ಇವೆಲ್ಲದರ ಮಿಳಿತವಿದೆ. ಸ್ವಾತಂತ್ರ್ಯದ ಸದುಪಯೋಗಪಡಿಸಿಕೊಂಡು ಸ್ವತಂತ್ರವಾಗಿಯೇ ಬದುಕೋಣ. ದಾಸ್ಯದ ಸಂಕೋಲೆಯಲ್ಲಿ ಬಂಧಿಯಾಗಿಯೂ ಅಲ್ಲ, ಸ್ವೇಚ್ಛಾಚಾರಿಗಳಾಗಿಯೂ ಅಲ್ಲ.
~ವಿಭಾ ವಿಶ್ವನಾಥ್
ಹಾಸಿಗೆಯ ಮೇಲಿನ ಬೆಡ್ ಶೀಟನ್ನು ತೆಗೆದು ಅದರಲ್ಲಿದ್ದ ಧೂಳು ಹಾರುವಂತೆ ಒಮ್ಮೆ ಜೋರಾಗಿ ಹೊಡೆದು ಮತ್ತೆ ಹಾಸಿ ಮಲಗಬೇಕೆನ್ನುವಷ್ಟರಲ್ಲಿ ಬೆರಳಲ್ಲಿದ್ದ ಉಂಗುರ ಜಾರಿ ಬುಗುರಿಯಂತೆ ಸುತ್ತ ತಿರು ತಿರುಗಿ ಬಿತ್ತು. ಒಂದರೆಕ್ಷಣ ಉಂಗುರ ಕಳೆದುಹೋಯಿತೇನೋ ಎಂಬ ಭಯ ಸುಳಿದಂತಾದರು ಕಣ್ಣ ಮುಂದೆಯೇ ಬಿದ್ದಿತ್ತು. ಹ್ಮ್ಂ!! ಮದುವೆ ನಿಶ್ಚಿತಾರ್ಥ ಸಂದರ್ಭದಲ್ಲಿ ಇವರೇ ನನಗೆ ಈ ಉಂಗುರ ಹಾಕಿದ್ದು. ಐದು ಎರಡೇಳು ಮೂರು ಹತ್ತು ವರ್ಷವೇ ಕಳೆಯಿತು ಮದುವೆಯಾಗಿ. ಆವಾಗ ಈ ಉಂಗುರ ನನ್ನ ಬೆರಳಿಗೆ ಚಿಕ್ಕದಾಗಿತ್ತು. ಅದೆಂತೋ ಕಷ್ಟ ಪಟ್ಟು ಅಜ್ಜಿ, ತಂಗಿ ಎಲ್ಲರೂ ಸೇರಿ ಹಾಕಿದ್ದು. ಇದೀಗ ಕೈಯ್ಯಿಂದ ತಂತಾನೇ ಜಾರಿ ಹೋಗುವಷ್ಟು ದೊಡ್ಡದಾಯಿತೇ? ಚಿಕ್ಕದೊಂದು ನಗು ಮೂಡಿ ಮರೆಯಾಯಿತು ಅವಳ ಮುಖದಲಿ.
ಬಿಕ್ಕಿ ಬಿಕ್ಕಿ ಅಳುವಷ್ಟು ಭೀಕರವಾದ ಕಥೆಯೇನು ನಡೆದಿಲ್ಲ ಬದುಕಲ್ಲಿ. ಆದರೆ, ಬದುಕಲ್ಲಿ ಹೊಸತೇನೂ ಇಲ್ಲ. ಹೊಸತರ ಕಲ್ಪನೆಯೂ ಆಕೆಯಲ್ಲಿಲ್ಲ. ಗಂಡ ದಿನಾ ಬೆಳ್ಳಗ್ಗೆ ಆಫೀಸ್‍ಗೆ ಹೋಗಿ ಸಾಯಂಕಾಲ ಬರ್ತಾನೆ. ಮಕ್ಕಳು ಶಾಲೆಗೆ ಹೋಗಿ ಬರ್ತಾವೆ. ಮನೆಯಲ್ಲಿರುವ ಮಾವನ ಆರೈಕೆ, ಅವರ ಸೇವೆ, ಮನೆಗೆಲಸ, ಬಂದು ಹೋಗುವ ನೆಂಟರಿಷ್ಟರ ಉಪಚಾರ, ಎಲ್ಲರೂ ರಜೆಯಲ್ಲಿರುವ ದಿನ ಎಲ್ಲಾದರೂ ಸುತ್ತಾಟ, ಅಥವಾ ಮನೆಯಲ್ಲೇ ಏನಾದರು ವಿಶೇಷ ಅಡುಗೆ. ಎರಡು ತಿಂಗಳಿಗೊಮ್ಮೆಯೋ, ಮೂರು ತಿಂಗಳಿಗೊಮ್ಮೆಯೋ ತವರು ಮನೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೊಸ ಸೀರೆ, ಉಡುಗೆಗಳು. ದಿನಾ ಸಂಜೆ ಸೀರಿಯಲ್ಲು, ಮಧ್ಯಾಹ್ನ ಮೂವಿ. ಒಂದಷ್ಟು ನ್ಯೂಸ್ ಚಾನಲ್‍ಗಳ ಲೊಚ ಲೊಚ. ಕೆಲವೊಮ್ಮೆ ಮಕ್ಕಳ ಹಠ ಜಗಳ, ಗಂಡನ ಟೆಂನ್ಷನ್, ಗಡಿಬಿಡಿ. ಒಂದಷ್ಟು ಫೋನಿನ ಕರೆಗಳು, ಮೆಸೇಜುಗಳು. ಬೆಳಗ್ಗೆ ಬರುವ ಹಾಲು ಹಾಕುವವ, ಪೇಪರ್ ಹಾಕುವ ಹುಡುಗರು. ಸಂಜೆ ಓರಗೆಯವರೊಡನೆ ಆಚೀಚೆ ಮನೆಗಳ, ಧಾರಾವಹಿಯ ಆಗುಹೋಗುಗಳ ಬಗ್ಗೆ ಪುಟ್ಟದೊಂದು ಕಲಾಪ, ಆಲಾಪ ಹಾಗೂ ಪ್ರಲಾಪ. ನನ್ನ ಮನೆ, ಪುಟ್ಟದೊಂದು ನಾಯಿ ಮತ್ತು ನಾನು.
ಬದುಕು ಅದೆಷ್ಟೋ ವರ್ಷಗಳಿಂದ ಹೀಗೇ ಸಾಗುತ್ತಿದೆ. ನಾನು ಖುಷಿಯಾಗೇ ಇದ್ದೇನೆ. ಪುರಾವೆ, ನಾನು ಆಗಾಗ ನಗುತ್ತೇನೆ. ನನ್ನ ಮಕ್ಕಳ ಕಾರಣದಿಂದಾಗಿ, ಗಂಡನ ಕಾರಣದಿಂದಾಗಿ ಹಾಗೂ ನಾನು ಬದುಕುತ್ತಿರುವ ಈ ಸುತ್ತಲಿನ ಸ್ವಾಸ್ಥ್ಯ ಸಮಾಜದ ಕಾರಣದಿಂದಾಗಿ.
ಅದೆಲ್ಲೋ ಜ್ವಾಲಾಮುಖಿ ಸ್ಪೋಟ ಆಗಿ ಒಂದಷ್ಟು ಜನ ಸತ್ತೋದ್ರು, ಇನ್ನೆಲ್ಲೋ ಮಳೆ ಬಂತು, ಊರು ಮುಳುಗಿತು. ಅಲ್ಲೆಲ್ಲೋ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೆಲ್ಲೋ ಯಾವುದೋ ಸಾಂಕ್ರಾಮಿಕ ರೋಗಕ್ಕೆ ಅದೆಷ್ಟೋ ಮಂದಿ ಸುಖಾ ಸುಮ್ಮನೆ ಬಲಿಯಾದರಂತೆ. ಹೌದು, ಆಕೆಯೂ ಮರುಕ ಪಡುತ್ತಾಳೆ, ತನ್ನ ಗಂಡನಲ್ಲಿ ಹೇಳುತ್ತಾಳೆ. ಮಕ್ಕಳಲ್ಲಿ ಮಾವನಲ್ಲಿ ಎಲ್ಲರಲ್ಲೂ ಹೇಳುತ್ತಾಳೆ. ಭಯ ಪಡುತ್ತಾಳೆ, ಹಾಗಾದರೆ ಇಲ್ಲೂ ಅಂತಹ ಜ್ವರ, ತನ್ನ ಕುಟುಂಬದ ಮಂದಿಗೆ ಬಂದರೆ? ಶಿವ ಶಿವಾ ಕಾಪಾಡಪ್ಪ ಎಂದು ಪ್ರಾರ್ಥಿಸುತ್ತಾಳೆ. ಒಂದಷ್ಟು ಸಮಯದ ನಂತರ ಮರೆತು ಬಿಡುತ್ತಾಳೆ. ಎಲ್ಲರ ಚಾಕರಿ ಮಾಡಿ ಆಕೆಗೂ ಸುಸ್ತಾಗುತ್ತದೆ. ಒಮ್ಮೊಮ್ಮೆ ಆಕೆಯೂ ಮುನಿಸಿಕೊಳ್ಳುತ್ತಾಳೆ. ರೇಗುತ್ತಾಳೆ. ನೋವಾಗಿದೆ, ಸಂಭ್ರಮವೂ ಆಗಿದೆ, ಬಸುರಲ್ಲಿ ಬಾಳಂತನದಲ್ಲಿ. ದೈಹಿಕವಾಗಷ್ಟೇ ಅಲ್ಲ, ಮಾನಸಿಕವಾಗಿಯೂ ಕೆಲವೊಮ್ಮೆ, ಸಂಬಂಧಿಕರೋ ಇನ್ನಾರೋ ಏನೋ ಅಂದಿದ್ದಕ್ಕಾಗಿ. ಆಕೆಯೂ ಅಂದಿದ್ದಾಳೆ, ಇನ್ನಾರಿಗೋ ನೋವು ಮಾಡಿದ್ದಾಳೆ. ಎಲ್ಲವನ್ನೂ ಈಗ ಮರೆತಿದ್ದಾಳೆ. ಕೆಲವೊಮ್ಮೆ ಹೋಲಿಸಿಕೊಂಡಿದ್ದಾಳೆ, ತನ್ನ ಬದುಕನ್ನು ಸಾಧಕಿಯ ಬದುಕಿನ ಜೊತೆ ತಕ್ಕಡಿಯಲ್ಲಿ ಹಾಕಿ ತೂಗ ಹೊರಟು ತನ್ನ ಭಾಗದ ತಕ್ಕಡಿಯನ್ನು ಎಳೆದು ಕೆಳಗಿಳಿಸಲು ಹೋಗಿ, ತಕ್ಕಡಿಯ ಜೊತೆ ತಾನೇ ಮೇಲಕ್ಕೆ ಹಾರಿ ಹೋದವಳನ್ನು ಮತ್ತೆ ಕೆಳಗಿಳಿಸಲು ಹರಸಾಹಸ ಪಡಬೇಕಾಯಿತು. ಜೀವನದ ಕೌತುಕಗಳ ಕುರಿತು ಬೆರಗಾಗಿದ್ದಾಳೆ. ಮೋಹಗೊಂಡಿದ್ದಾಳೆ, ಷಡ್ ವೈರಿಗಳೆಲ್ಲವೂ ಒಮ್ಮೊಮ್ಮೆ ಜೀವ ಪಡೆಯುತ್ತವೆ ಅವಳ ಒಳಗೆ. ಇನ್ನೊಮ್ಮೊಮ್ಮೆ ಕವಿ ವರ್ಣಿಸುವಂತಹ ಹೆಣ್ಣಾಗಿ ಕಾಣುತ್ತಾಳೆ. ಪ್ರೀತಿ, ಮಮತೆ, ವಾತ್ಸಲ್ಯ ಇತ್ಯಾದಿ ಇತ್ಯಾದಿಗಳ ಮೂಲ ದೇವತೆ ಆಕೆಯೇನೋ ಎಂಬಂತೆ. ಬದುಕು ಬದಲಾಗುತ್ತಲೇ ಇರುತ್ತದೆ ಎಂಬುದನ್ನು ತೀವ್ರವಾಗಿ ನಂಬಿದ್ದಾಳೆ. ಆದರೂ ಹಲವು ವರ್ಷಗಳಿಂದ ಒಂದೇ ರೀತಿಯ ಜೀವನಕ್ಕೆ ಒಗ್ಗಿಕೊಂಡಿದ್ದಾಳೆ. ಗಂಡನನ್ನು ಕಾಡಿದ್ದಾಳೆ, ಪೀಡಿಸಿದ್ದಾಳೆ. ಮಕ್ಕಳೊಂದಿಗೆ ಆಟವಾಡಿದ್ದಾಳೆ, ಪೋಷಕರ ಸಭೆಗೆ ಹಾಜರಾಗಿದ್ದಾಳೆ. ಹೀಗೆ…… ನಿತ್ಯವೂ ನೂತನ, ಗೊತ್ತು ಗುರಿಯಿಲ್ಲದ ಜೀವನದೊಡನೆ ಖುಷಿಯಾಗಿಯೇ ಒಪ್ಪಂದ ಮಾಡಿಕೊಂಡಿದ್ದಾಳೆ.
ಒಂದೇ ಒಂದು ಆತಂಕ: ಹೊಸತೊಂದು ಪ್ರಪಂಚದ ಬಗ್ಗೆ, ಆಕೆಗೆ ತಲುಪಲು ಹಿಡಿಯಲು ಸಾಧ್ಯವಾಗದ ಬದುಕಿನ ಬಗ್ಗೆ ಆಕೆಗೇನಾದರೂ ತಿಳಿದು ಹೋದರೆ? ಆಕೆಯ ಅಂತರಾಳದ ಭಾವನೆಗಳು ಸುಮ್ಮನಿದ್ದಾವೇನು? ಮತ್ತೆ ಗೆಜ್ಜೆ ಕಟ್ಟಿ ನರ್ತಿಸ ಹೊರಟಾವು. ನಿಧಾನವಾಗಿಯೇ ಆಕೆ ಕರಗಿ ಹೋದಾಳು.
(ಇದೊಂದು ಪುಟ್ಟ ಪ್ರಪಂಚ, ಭಾವನೆಗಳದ್ದೇ ರಾಯಭಾರ, ಎಲ್ಲಾ ಪಾತ್ರಗಳನ್ನು ನಿರ್ವಹಿಸುವವರು ಅವರೇ. ನಿರ್ದೇಶನ, ನಿರ್ಮಾಣ, ಸಂಭಾಷಣೆ, ಕಥೆ ಎಲ್ಲವೂ ಅವುಗಳದ್ದೇ).
-ಪ್ರಗಲ್ಭಾ
ಕಳೆದ ಒಂದು ವಾರದಿಂದ ಎಲ್ಲಾ ಮಾಧ್ಯಮಗಳಲ್ಲಿ ರಾರಾಜಿಸುತ್ತಿರುವ ಪ್ರಮುಖ ಸುದ್ದಿ ಎಂದರೆ ಕರ್ನಾಟಕದ ವಿಧಾನಸಭಾ ಚುನಾವಣೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಬೆನ್ನು ತಟ್ಟುತ್ತಾ , ಎದುರಾಳಿಗಳನ್ನು ಜರಿಯೋದೇ ಆಗಿಬಿಟ್ಟಿದೆ. ಯಾರಿಗೇ ಯಾರೂ ಕಡಿಮೆಯಲ್ಲ ಎಂಬುದನ್ನು ನಾನು ಹೇಳಬೇಕಿಲ್ಲ ಅಲ್ಲವೇ…?
ಈವಾಗ ವಿಷಯಕ್ಕೆ ಬರೋಣ, ನಮಗೆ ಪಕ್ಷಗಳು ಮುಖ್ಯನಾ ಅಥವಾ ದೇಶ -ರಾಜ್ಯ-ಹಳ್ಳಿಗಳ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಉತ್ತಮ ನಾಯಕ ಅಗತ್ಯನಾ…..? ನಾನು ಇಲ್ಲಿ ಯಾವುದೇ ಪಕ್ಷದ ವಿರೋಧಿಸುತ್ತಿಲ್ಲ , ನಮ್ಮನ್ನು ನಾವೇ ಪ್ರಶ್ನಿಸಬೇಕಾಗಿದೆ. ಸ್ವಾತಂತ್ರ್ಯ ದೊರಕಿ 7 ದಶಕಗಳಿಗೂ ಕಳೆದರೂ ನಾವಿನ್ನೂ ಬಡ ರಾಷ್ಟ್ರ ಎಂದು ಕರೆಸಿಕೊಳ್ಳುತ್ತಿದ್ದೇವೆ ಎಂದರೆ ನಮ್ಮ ತಪ್ಪುಗಳೂ ಇವೆ ಅಲ್ವಾ. ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಗಿತ್ತು ಅನ್ನೋ ಹಾಗೆ ಜಾತಿ ಧರ್ಮ ಭಾಷೆ ಗಳ ಕಾದಾಟಕ್ಕೆ ಅಭಿವೃದ್ಧಿ ಹಳ್ಳ ಹಿಡೀತು ಅಷ್ಟೇ. ವೈಚಾರಿಕ ಭಿನ್ನಾಭಿಪ್ರಾಯಗಳನ್ನು ತಂದಿಟ್ಟು ಸಾಮಾನ್ಯ ಜನರು ಹೊಡೆದಾಡಿ ಸತ್ತಿದ್ದು ಬಿಟ್ಟು ಯಾವುದಾದರೂ ನಾಯಕನೆನಿಸಿಕೊಂಡವನನ್ನು ಕಳೆದುಕೊಂಡಿದ್ದು ಇದ್ಯಾ…?
ಹಗರಣಗಳ ಸರಮಾಲೆ ಧರಿಸಿ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ತುಂಬಿಕೊಂಡಿದ್ದು ಬಿಟ್ಟರೆ ಬಡವರ /ತಮ್ಮ ಕ್ಷೇತ್ರದ ಉದ್ಧಾರ ಮಾಡುವ ಕಳಕಳಿ ಇರುವ ನಾಯಕರು ಬೆರಳೆಣಿಕೆಯಷ್ಟು ಮಾತ್ರ. ಹಾಗಾಗಿಯೇ ಇಂದಿಗೂ ಬಡವ ಬಡವನಗಿಯೇ ಇದ್ದಾನೆ, ಹಳ್ಳಿಗಳು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ವಂಚಿತವಾಗಿವೆ.
ಬನ್ನಿ ಇದೇ ಮೇ 12ರಂದು ಕರ್ನಾಟಕದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇವೆಲ್ಲದಕ್ಕೂ ಉತ್ತರ ನೀಡೋಣ. ಜಾತಿ ಮತ ಧರ್ಮ ಭಾಷೆ ಗಳ ತಾರತಮ್ಯತೆ ಇಲ್ಲದೆ ಕ್ಷೇತ್ರದ ಜನರ ಅಭಿವೃದ್ಧಿ ರಕ್ಷಣೆ ಶ್ರಮಿಸುವ ಜನನಾಯಕನನ್ನು ಆಯ್ಕೆ ಮಾಡೋಣ.
– ದೀಪಕ್ ನೇರಳ
*************************
– ವಿಭಾ ವಿಶ್ವನಾಥ್
*******************************
“ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ” ಎಂಬ ಎಂ.ಎಸ್. ಸುಬ್ಬಲಕ್ಷ್ಮೀಯವರ ಸುಮಧುರ ಕಂಠದಿ ಮೂಡಿಬಂದ ಸುಪ್ರಭಾತ 7 ಗಂಟೆಗೆ ಹಾಡಿಕೊಳ್ತಾ ಇದೆ. ಅದೇರೀ.. ಅಲಾರ್ಮ್ ಟೋನ್😀!.. ಸೂರ್ಯೋದಯಕ್ಕೂ ಮೊದಲೇ ಕೇಳ್ತಾ ಇದ್ದ ಸುಪ್ರಭಾತ ಇಂದು 7-8 ಗಂಟೆಗೆ ನಿದ್ದೆ ಕಣ್ಣಲ್ಲಿ ಕೇಳ್ತಾ ಇದ್ದೇವೆ. ಅಂತೂ ಇಂತೂ ನಿದ್ದೆ ಬಿಡೋ ಹೊತ್ತಿಗೆ ಮೊಬೈಲಮ್ಮ ತನ್ನ ಪಾಡಿಗೆ ಹಾಡಿ ಸುಮ್ಮನಾಗಿ ಬಿಟ್ಲು. ಎದ್ದ ಮೇಲೆ ಇದೆಯಲ್ವಾ ನಿತ್ಯ ಶೌಚ-ಕ್ರಿಯೆಗಳು..(ಅದೊಂದೇ ಇರ್ಬೇಕು ಹಿಂದಿನಿಂದಲೂ ತಪ್ಪದೇ ಪಾಲಿಸಿಕೊಂಡು ಬಂದ ಮುಂಜಾನೆಯ ಕರ್ಮಗಳು!). ಮತ್ತೆ ಶುರುವಾಯ್ತು ನೋಡಿ ಯಂತ್ರಗಳ ಕೆಲಸ, ದೋಸೇನೋ ರೊಟ್ಟೀನೋ ಮಾಡ್ಬೇಕು ಎಂದು ಹಿಂದಿನ ರಾತ್ರಿ ಅಕ್ಕಿ ನೆನೆ ಹಾಕಿರ್ತೀವಿ, ತೊಳೆದು ಮಿಕ್ಸಿ/ಗ್ರೈಂಡರ್ ಗೆ ಹಾಕಿದ್ರೆ ಆಯ್ತು, ರುಬ್ಬಿ ಕೊಡುತ್ತೆ. ಒಲೆ ಹಚ್ಚುವ ಕೆಲಸನೂ ಇಲ್ಲ ಈವಾಗ, ಕಡ್ಡಿ ಗೀರಿದ್ರೆ ಮನೆನೇ ಹೊತ್ತಿ ಉರಿಸೋ ಗ್ಯಾಸ್ ಇದೆಯಲ್ಲಾ. ಹಾಗೂ ಹೀಗೂ ಬೆಳಗಿನ ಉಪಹಾರ ರೆಡಿಯಾಗಿ ಬಿಡುತ್ತೆ. ಅಕ್ಕಿ ತೊಳೆದು ಕುಕ್ಕರ್ ಗೆ ಹಾಕಿದ್ರೆ ಕ್ಷಣಾರ್ಧದಲಿ ಮಧ್ಯಾಹ್ನದ ಊಟನೂ ರೆಡಿ ಆಯ್ತು. ಮುಂದೆ…..?
ಬಟ್ಟೆ ವಾಷ್, ನೆಲ ಗುಡಿಸೋದು, ಒರೆಸೋದು ಎಲ್ಲವೂ ಯಂತ್ರಮಯವಾಗಿಬಿಟ್ಟಿದೆಯಲ್ವೇ? ಹೀಗೆ ಇಂದಿನ ಯಾಂತ್ರೀಕೃತ ಒತ್ತಡದ ದಿನಗಳಲ್ಲಿ ಮನಸ್ಸು ಹಾಳು-ಮೂಳುಗಳ ಗಟಾರವಾಗಿ ಹೋಗಿದೆ. ನೆಮ್ಮದಿ-ಸಂತೋಷ ಎಂದರೇನು ಎಂಬ ಹತ್ತು ಮಾರ್ಕ್ಸ್ ನ ಪ್ರಶ್ನೆಗೆ ಪುಟಗಟ್ಟಲೆ ಉತ್ತರ ಬರೆಯೋರೆ ನಾವು. ಆದರೆ ಎರಡು ಪದಗಳಲ್ಲೇ ಉತ್ತರವಿದೆ ಎಂಬ ಸತ್ಯಾಂಶವನ್ನು ನಾವು ಅರಿತೇ ಇಲ್ಲ. ಹೌದು ಎಷ್ಟೇ ಒತ್ತಡದ ಕ್ಷಣಗಳಲ್ಲೂ ಒಮ್ಮೆ ಆ ದಿನಗಳನ್ನು ಅಂದರೆ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ತುಂಟ ನಗುವೊಂದು ತುಟಿಯಂಚಲ್ಲಿ ಮೂಡುವುದಂತೂ ಖಚಿತವಲ್ಲವೇ….?.ಲೋಕದ ಪರಿಜ್ಞಾನವಿಲ್ಲದೆ ಕೇವಲ ಆಟ-ತುಂಟಾಟಗಳಲ್ಲೇ ದಿನ ಕಳೆದ ಆ ಬಾಲ್ಯ ಮತ್ತೆಂದೂ ಹಿಂದಿರುಗಿ ಬಾರದು. ಮೂರು ದಶಕಗಳು ಭೂತಕಾಲಕ್ಕೆ ಸೇರ್ಪಡೆಗೊಂಡರೂ, ಮತ್ತೆ ಮತ್ತೆ ಕಾಡುವ-ನಗಿಸುವ ಆ ಮೊದಲಾರ್ಧ ದಶಕದ ದಿನಗಳ ಮತ್ತೆ ನೆನಪಿಸಿ ಕೆಲಸದ ಒತ್ತಡದಿ ಗಂಟಿಕ್ಕಿದ ನಿಮ್ಮ ಮುಖದಲ್ಲೊಂದು ಮಂದಹಾಸ ಮೂಡಿದರೆ ನಾ ಗೀಚಿದ್ದು ವ್ಯರ್ಥವಾಗಿಲ್ಲ ಎನ್ನಬಹುದೇನೋ…..!!!
ತೊಟ್ಟಿಲಲ್ಲಿ ಲಾಲಿ ಹಾಡು ಕೇಳಿದ ನೆನಪಿರಲ್ಲ ನಿಜ, ಆದ್ರೆ ಅಂಬೆಗಾಲಿಡುತ್ತಾ ನಡೆದಾಡುವ ಪ್ರಯತ್ನದಲ್ಲಿ ಬಿದ್ದು-ಎದ್ದ ಕ್ಷಣಗಳನ್ನು ಆವಾಗಾವಾಗ ನಮ್ಮ ಹೆತ್ತವರು ಅಣಕಿಸೋದು ಇಂದಿಗೂ ಇದ್ದೇ ಇರುತ್ತೆ. ಆ ನಂತರದ ದಿನಗಳ ಕಥೆಗಳೇ ಸ್ವಾರಸ್ಯಕರ. ಕದ್ದು ಮುಚ್ಚಿ ಮಣ್ಣು-ಮಸಿ ಎಂದ್ಯಾವುದನ್ನೂ ನೋಡದೆ ಬಾಯಿಗೆ ಹಾಕಿ ಚಪ್ಪರಿಸಿಕೊಂಡಿದ್ದು, ಮನೆಗಿಂತ ಬೆಚ್ಚನೆಯ ಒಣಹುಲ್ಲಿನ ಬಣಗಳಲ್ಲಿ ಹೊರಳಾಡಿ ಎದ್ದಾಗ ಮೈಯ ಅಸಹನೀಯ ತುರಿಕೆಗೆ ಕಣ್ಣೀರಿಟ್ಟಿದ್ದು, ಹಟ್ಟಿಯೊಳಗಿನ ಮುದ್ದು ಮುಖದ ಕರುಗಳನ್ನು ಬಿಗಿದಪ್ಪಿ ಮುದ್ದಾಡಿದ್ದು, ಮುದ್ದಿನ ನಾಯಿಯ ಅಕಾಲಿಕ ಅಗಲಿಕೆಗೆ ಬಿಕ್ಕಿ ಬಿಕ್ಕಿ ಅತ್ತಿದ್ದು, ಮನೆಯಲ್ಲೇ ಸಾಕಿದ ನಾಟಿ ಕೋಳಿಯ ಸಾರು ಮುಟ್ಟದೇ ಸಪ್ಪೆ ಊಟ ಮಾಡಿದ್ದು, ಮಣ್ಣು-ಎಲೆ-ಕಡ್ಡಿಗಳನ್ನು ಬಳಸಿ ಕಟ್ಟಿದ ಮೊದಲ ಅರಮನೆ, ಚಿಪ್ಪಿಯೊಳಗಿನ ಮಣ್ಣಿನ ಇಡ್ಲಿಯಂತೆ ಹತ್ತು ಹಲವು ಬಗೆಯ ಫಲಾಹಾರಗಳು, ಕೈಗೆ ಸಿಕ್ಕ ಪಾತ್ರೆಗಳ ತಾಳಬದ್ಧ 😜😜😜 ಬಡಿತಕ್ಕೆ ಕುಣಿದ ಹುಲಿ ವೇಷದ ಕುಣಿತ, ಊಟ-ತಿಂಡಿಗಳ ನೆನಪೇ ಇಲ್ಲದೆ ಪೇರಳೆ-ಮಾವು-ಗೇರು ಹಣ್ಣುಗಳಲ್ಲೇ ಹೊಟ್ಟೆ ತುಂಬಾ ತಿಂದು ತೇಗಿದ್ದು, ಅಮ್ಮನ ಸಾರಿಯಲಿ ಕಟ್ಟಿದ ಜೋಕಾಲಿ, ಎಂತಹುದೇ ಹಠಮಾರಿತನವನ್ನೂ ನೀಗಿಸಬಲ್ಲ ಅಪ್ಪ ಹಿಡಿಯುತ್ತಿದ್ದ “ಪುಳಿತ್ತಡರ್” ಎಂಬ ಮಾಂತ್ರಿಕ ದಂಡ, ಮುಸ್ಸಂಜೆಯಾದರೆ ಕಾಡುವ ಗುಮ್ಮನ ಭಯ.
“ಕಲಾಭಿಮಾನಿಗಳೇ, ಕಲಾರಸಿಕರೇ… ಇಂದು ರಾತ್ರಿ 9:30ಕ್ಕೆ ಸರಿಯಾಗಿ ನಿಮ್ಮ ಊರಿನ ಬಂಡೀಮಾಳದಲ್ಲಿ ಹಾಕಿರುವ ವಿದ್ಯುತ್ ದೀಪಾಲಂಕೃತವಾದ ಭವ್ಯ-ದಿವ್ಯ ರಂಗುರಂಗಿನ ರಂಗ ಮಂಟಪದಲ್ಲಿ ಒಮ್ಮೆ ಮತ್ತೊಮ್ಮೆ ಮಗದೊಮ್ಮೆ ನೋಡಲೇಬೇಕಿನಿಸುವ ಒಂದೇ ಒಂದು ಅತೀ ನೂತನ ಪ್ರಸಂಗವನ್ನು ಆಡಿತೋರಿಸಲಿದ್ದೇವೆ, ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ.. ಇಂದು ರಾತ್ರಿ 9:30ಕ್ಕೆ ಸರಿಯಾಗಿ…” ಹೀಗೆ ಕಂಚಿನ ಕಂಠದಲ್ಲಿ ಯಕ್ಷಗಾನದ ಪ್ರಚಾರ ಮಾಡುತ್ತಿದ್ದ ಜೀಪಿನ ಹಿಂದೆ ಕರಪತ್ರಕ್ಕಾಗಿ ಓಡುತ್ತಿದ್ದ ಆ ಬಾಲ್ಯದ ದಿನಗಳತ್ತ ಒಮ್ಮೆ ಹೋಗಿ ಬರೋಣವೇ…?