
ಇನ್ನಾದರೂ ಬದಲಾಗೋಣ, ಅಷ್ಟಲ್ಲವಾದರೂ, ಸ್ವಲ್ಪ..
ಮಗನಿಗೆ “ಸುಳ್ಳು ಹೇಳಬಾರದು,ಸತ್ಯವನ್ನೇ ಹೇಳಬೇಕು ” ಎಂದು ಪ್ರೇರೇಪಿಸಿ ಬೆಳೆಸಿದ್ದೇ ತಪ್ಪಾಯಿತೇ? ಎಂಬ ಯೋಚನೆಯಲ್ಲಿದ್ದ ನೀಲಾಳನ್ನು ಮಗನೇ ಎಚ್ಚರಿಸಿದ್ದ.
ಸುಮಾರು ವರ್ಷಗಳು ಮಕ್ಕಳೇ ಆಗದೇ ಹತಾಶೆಯಲ್ಲಿದ್ದ ನೀಲಾ-ಸಂತೋಷರಿಗೆ ದೇವರೇ ವರ ನೀಡಿದಂತೆ ಮುದ್ದಿನ ಮಗನಾಗಿ ಮಡಿಲು ತುಂಬಿದ್ದ ಅನಾಥ ಮಗು ಇವನು. ಸತ್ಯ ಹರಿಶ್ಚಂದ್ರ ನಾಟಕ ನೋಡಿಕೊಂಡು ಬರುತ್ತಿರುವಾಗ ಸಿಕ್ಕ ಮಗುವನ್ನು ಇಬ್ಬರೂ ಆದರ್ಶದಿಂದ ತಮ್ಮದೇ ಮಗುವೆಂಬಂತೆ ಬೆಳೆಸಿದ್ದರು, ಜೊತೆಗೆ ಹರಿಶ್ಚಂದ್ರ ಎಂಬ ಹೆಸರನ್ನೇ ಇಟ್ಟಿದ್ದರು. ಅವನೂ ಅಷ್ಟೆ, ಸತ್ಯ ಹರಿಶ್ಚಂದ್ರ ನನ್ನೇ ಆದರ್ಶವನ್ನಾಗಿಟ್ಟುಕೊಂಡಿದ್ದರೂ, ಆಧುನಿಕ ಯುವಕರಂತೆ ನಡೆ-ನುಡಿ,ಧೈರ್ಯ-ಸ್ಥೈರ್ಯ ಅಷ್ಟೇ ಅಲ್ಲದೆ, ಕ್ರೀಡೆಯಲ್ಲೂ ಮುಂದಿದ್ದ. ಮಗನ ಆ ಎಲ್ಲಾ ಗುಣಗಳಿಗೇ ಮೆಚ್ಚಿಕೊಂಡಿದ್ದ ನೀಲಾಳಿಗೆ ಇಂದು ಆ ಗುಣಗಳೇ ಆತಂಕಕ್ಕೆ ಕಾರಣವಾಗಿದ್ದವು. ಆದದ್ದಿಷ್ಟು,ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಚೆನ್ನಾಗಿ ತಯಾರಾಗಿ ಹೋಗಿದ್ದ ಮಗ ಆಲ್ಲಿ ನಡೆದ ಸಾಮೂಹಿಕ ನಕಲನ್ನು ನೋಡಿ ಕೆಂಡಾಮಂಡಲವಾಗಿದ್ದ. ಓದಿದವರಿಗೂ, ಓದದವರಿಗೂ ಒಂದೇ ಎಂಬಂತೆ ಮಾಡಿದ್ದ ಆ ಇಡೀ ಅವ್ಯವಸ್ಥೆಯ ಕುರಿತು ಟಿ.ವಿ ಗೆ ಹೇಳಿಕೆ ನೀಡಿ ಸಾಮೂಹಿಕ ವಲಯದಲ್ಲೇ ಆ ಕುರಿತ ಚರ್ಚೆಯಾಗುವಂತೆ ಮಾಡಿದ್ದ.ಈ ಕುರಿತಂತೆ ಮಗನಿಗೆ ಬರುತ್ತಿದ್ದ ಜೀವ ಬೆದರಿಕೆ ಕರೆಗಳೇ ಅವಳ ಆತಂಕಕ್ಕೆ ಕಾರಣ.
ಇದನ್ನು ಕುರಿತು ಮಗ ಅಮ್ಮನಿಗೆ ಹೇಳಿದ್ದು ಒಂದೇ ಮಾತುಗಳೊಂದಿಗೆ “ನೂರು ದಿನ ಸತ್ಯ ಮುಚ್ಚಿಟ್ಟು ಇಲಿಯಂತೆ ಬದುಕುವುದಕ್ಕಿಂತ, ಮೂರು ದಿನ ಸತ್ಯ ಹೇಳಿ ಹುಲಿಯಂತೆ ಬದುಕುವುದೇ ಲೇಸು”, ಆದದ್ದಾಗಲಿ ಬಂದದ್ದನ್ನೆದುರಿಸುವೆನೆಂದಾಗ, ಒಂದರೆಕ್ಷಣ ನೀಲಾಳಿಗೆ, ಸತ್ಯ ಹರಿಶ್ಚಂದ್ರ ನೇ ಪುನರ್ಜನ್ಮವನ್ನೆತ್ತಿ ಬಂದಿರುವನೇನೋ ಎನ್ನಿಸಿಬಿಟ್ಟಿತು.
~ವಿಭಾ ವಿಶ್ವನಾಥ್