ಪುಟ್ಟ ಪ್ರಪಂಚ

Putta prapancha
ಇದೊಂದು ಪುಟ್ಟ ಪ್ರಪಂಚ, ಭಾವನೆಗಳದ್ದೇ ರಾಯಭಾರ, ಎಲ್ಲಾ ಪಾತ್ರಗಳನ್ನು ನಿರ್ವಹಿಸುವವರು ಅವರೇ. ನಿರ್ದೇಶನ, ನಿರ್ಮಾಣ, ಸಂಭಾಷಣೆ, ಕಥೆ ಎಲ್ಲವೂ ಅವುಗಳದ್ದೇ.

             ಹಾಸಿಗೆಯ ಮೇಲಿನ ಬೆಡ್ ಶೀಟನ್ನು ತೆಗೆದು ಅದರಲ್ಲಿದ್ದ ಧೂಳು ಹಾರುವಂತೆ ಒಮ್ಮೆ ಜೋರಾಗಿ ಹೊಡೆದು ಮತ್ತೆ ಹಾಸಿ ಮಲಗಬೇಕೆನ್ನುವಷ್ಟರಲ್ಲಿ ಬೆರಳಲ್ಲಿದ್ದ ಉಂಗುರ ಜಾರಿ ಬುಗುರಿಯಂತೆ ಸುತ್ತ ತಿರು ತಿರುಗಿ ಬಿತ್ತು. ಒಂದರೆಕ್ಷಣ ಉಂಗುರ ಕಳೆದುಹೋಯಿತೇನೋ ಎಂಬ ಭಯ ಸುಳಿದಂತಾದರು  ಕಣ್ಣ ಮುಂದೆಯೇ ಬಿದ್ದಿತ್ತು. ಹ್ಮ್ಂ!! ಮದುವೆ ನಿಶ್ಚಿತಾರ್ಥ ಸಂದರ್ಭದಲ್ಲಿ ಇವರೇ ನನಗೆ ಈ ಉಂಗುರ ಹಾಕಿದ್ದು. ಐದು ಎರಡೇಳು ಮೂರು ಹತ್ತು ವರ್ಷವೇ ಕಳೆಯಿತು ಮದುವೆಯಾಗಿ. ಆವಾಗ ಈ ಉಂಗುರ ನನ್ನ ಬೆರಳಿಗೆ ಚಿಕ್ಕದಾಗಿತ್ತು. ಅದೆಂತೋ ಕಷ್ಟ ಪಟ್ಟು ಅಜ್ಜಿ, ತಂಗಿ ಎಲ್ಲರೂ ಸೇರಿ ಹಾಕಿದ್ದು. ಇದೀಗ ಕೈಯ್ಯಿಂದ ತಂತಾನೇ ಜಾರಿ ಹೋಗುವಷ್ಟು ದೊಡ್ಡದಾಯಿತೇ? ಚಿಕ್ಕದೊಂದು ನಗು ಮೂಡಿ ಮರೆಯಾಯಿತು ಅವಳ ಮುಖದಲಿ.

             ಬಿಕ್ಕಿ ಬಿಕ್ಕಿ ಅಳುವಷ್ಟು ಭೀಕರವಾದ ಕಥೆಯೇನು ನಡೆದಿಲ್ಲ ಬದುಕಲ್ಲಿ. ಆದರೆ, ಬದುಕಲ್ಲಿ ಹೊಸತೇನೂ ಇಲ್ಲ. ಹೊಸತರ ಕಲ್ಪನೆಯೂ ಆಕೆಯಲ್ಲಿಲ್ಲ. ಗಂಡ ದಿನಾ ಬೆಳ್ಳಗ್ಗೆ ಆಫೀಸ್‍ಗೆ ಹೋಗಿ ಸಾಯಂಕಾಲ ಬರ್ತಾನೆ. ಮಕ್ಕಳು ಶಾಲೆಗೆ ಹೋಗಿ ಬರ್ತಾವೆ. ಮನೆಯಲ್ಲಿರುವ ಮಾವನ ಆರೈಕೆ, ಅವರ ಸೇವೆ, ಮನೆಗೆಲಸ, ಬಂದು ಹೋಗುವ ನೆಂಟರಿಷ್ಟರ ಉಪಚಾರ, ಎಲ್ಲರೂ ರಜೆಯಲ್ಲಿರುವ ದಿನ ಎಲ್ಲಾದರೂ ಸುತ್ತಾಟ, ಅಥವಾ ಮನೆಯಲ್ಲೇ ಏನಾದರು ವಿಶೇಷ ಅಡುಗೆ. ಎರಡು ತಿಂಗಳಿಗೊಮ್ಮೆಯೋ, ಮೂರು ತಿಂಗಳಿಗೊಮ್ಮೆಯೋ ತವರು ಮನೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೊಸ ಸೀರೆ, ಉಡುಗೆಗಳು. ದಿನಾ ಸಂಜೆ ಸೀರಿಯಲ್ಲು, ಮಧ್ಯಾಹ್ನ ಮೂವಿ. ಒಂದಷ್ಟು ನ್ಯೂಸ್ ಚಾನಲ್‍ಗಳ ಲೊಚ ಲೊಚ. ಕೆಲವೊಮ್ಮೆ ಮಕ್ಕಳ ಹಠ ಜಗಳ, ಗಂಡನ ಟೆಂನ್ಷನ್, ಗಡಿಬಿಡಿ. ಒಂದಷ್ಟು ಫೋನಿನ ಕರೆಗಳು, ಮೆಸೇಜುಗಳು. ಬೆಳಗ್ಗೆ ಬರುವ ಹಾಲು ಹಾಕುವವ, ಪೇಪರ್ ಹಾಕುವ ಹುಡುಗರು. ಸಂಜೆ ಓರಗೆಯವರೊಡನೆ ಆಚೀಚೆ ಮನೆಗಳ, ಧಾರಾವಹಿಯ ಆಗುಹೋಗುಗಳ ಬಗ್ಗೆ ಪುಟ್ಟದೊಂದು ಕಲಾಪ, ಆಲಾಪ ಹಾಗೂ ಪ್ರಲಾಪ. ನನ್ನ ಮನೆ, ಪುಟ್ಟದೊಂದು ನಾಯಿ ಮತ್ತು ನಾನು.
             ಬದುಕು ಅದೆಷ್ಟೋ ವರ್ಷಗಳಿಂದ ಹೀಗೇ ಸಾಗುತ್ತಿದೆ. ನಾನು ಖುಷಿಯಾಗೇ ಇದ್ದೇನೆ. ಪುರಾವೆ, ನಾನು ಆಗಾಗ ನಗುತ್ತೇನೆ. ನನ್ನ ಮಕ್ಕಳ ಕಾರಣದಿಂದಾಗಿ, ಗಂಡನ ಕಾರಣದಿಂದಾಗಿ ಹಾಗೂ ನಾನು ಬದುಕುತ್ತಿರುವ ಈ ಸುತ್ತಲಿನ ಸ್ವಾಸ್ಥ್ಯ ಸಮಾಜದ ಕಾರಣದಿಂದಾಗಿ.
ಅದೆಲ್ಲೋ ಜ್ವಾಲಾಮುಖಿ ಸ್ಪೋಟ ಆಗಿ ಒಂದಷ್ಟು ಜನ ಸತ್ತೋದ್ರು, ಇನ್ನೆಲ್ಲೋ ಮಳೆ ಬಂತು, ಊರು ಮುಳುಗಿತು. ಅಲ್ಲೆಲ್ಲೋ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೆಲ್ಲೋ ಯಾವುದೋ ಸಾಂಕ್ರಾಮಿಕ ರೋಗಕ್ಕೆ ಅದೆಷ್ಟೋ ಮಂದಿ ಸುಖಾ ಸುಮ್ಮನೆ ಬಲಿಯಾದರಂತೆ. ಹೌದು, ಆಕೆಯೂ ಮರುಕ ಪಡುತ್ತಾಳೆ, ತನ್ನ ಗಂಡನಲ್ಲಿ ಹೇಳುತ್ತಾಳೆ. ಮಕ್ಕಳಲ್ಲಿ ಮಾವನಲ್ಲಿ ಎಲ್ಲರಲ್ಲೂ ಹೇಳುತ್ತಾಳೆ. ಭಯ ಪಡುತ್ತಾಳೆ,  ಹಾಗಾದರೆ ಇಲ್ಲೂ ಅಂತಹ ಜ್ವರ, ತನ್ನ ಕುಟುಂಬದ ಮಂದಿಗೆ ಬಂದರೆ? ಶಿವ ಶಿವಾ ಕಾಪಾಡಪ್ಪ ಎಂದು ಪ್ರಾರ್ಥಿಸುತ್ತಾಳೆ. ಒಂದಷ್ಟು ಸಮಯದ ನಂತರ ಮರೆತು ಬಿಡುತ್ತಾಳೆ. ಎಲ್ಲರ ಚಾಕರಿ ಮಾಡಿ ಆಕೆಗೂ ಸುಸ್ತಾಗುತ್ತದೆ. ಒಮ್ಮೊಮ್ಮೆ ಆಕೆಯೂ ಮುನಿಸಿಕೊಳ್ಳುತ್ತಾಳೆ. ರೇಗುತ್ತಾಳೆ. ನೋವಾಗಿದೆ, ಸಂಭ್ರಮವೂ ಆಗಿದೆ, ಬಸುರಲ್ಲಿ ಬಾಳಂತನದಲ್ಲಿ. ದೈಹಿಕವಾಗಷ್ಟೇ ಅಲ್ಲ, ಮಾನಸಿಕವಾಗಿಯೂ ಕೆಲವೊಮ್ಮೆ, ಸಂಬಂಧಿಕರೋ ಇನ್ನಾರೋ ಏನೋ ಅಂದಿದ್ದಕ್ಕಾಗಿ. ಆಕೆಯೂ ಅಂದಿದ್ದಾಳೆ, ಇನ್ನಾರಿಗೋ ನೋವು ಮಾಡಿದ್ದಾಳೆ. ಎಲ್ಲವನ್ನೂ ಈಗ ಮರೆತಿದ್ದಾಳೆ. ಕೆಲವೊಮ್ಮೆ ಹೋಲಿಸಿಕೊಂಡಿದ್ದಾಳೆ, ತನ್ನ ಬದುಕನ್ನು ಸಾಧಕಿಯ ಬದುಕಿನ ಜೊತೆ ತಕ್ಕಡಿಯಲ್ಲಿ ಹಾಕಿ ತೂಗ ಹೊರಟು ತನ್ನ ಭಾಗದ ತಕ್ಕಡಿಯನ್ನು ಎಳೆದು ಕೆಳಗಿಳಿಸಲು ಹೋಗಿ, ತಕ್ಕಡಿಯ ಜೊತೆ ತಾನೇ ಮೇಲಕ್ಕೆ ಹಾರಿ ಹೋದವಳನ್ನು ಮತ್ತೆ ಕೆಳಗಿಳಿಸಲು ಹರಸಾಹಸ ಪಡಬೇಕಾಯಿತು. ಜೀವನದ ಕೌತುಕಗಳ ಕುರಿತು ಬೆರಗಾಗಿದ್ದಾಳೆ. ಮೋಹಗೊಂಡಿದ್ದಾಳೆ, ಷಡ್ ವೈರಿಗಳೆಲ್ಲವೂ ಒಮ್ಮೊಮ್ಮೆ ಜೀವ ಪಡೆಯುತ್ತವೆ ಅವಳ ಒಳಗೆ. ಇನ್ನೊಮ್ಮೊಮ್ಮೆ ಕವಿ ವರ್ಣಿಸುವಂತಹ ಹೆಣ್ಣಾಗಿ ಕಾಣುತ್ತಾಳೆ. ಪ್ರೀತಿ, ಮಮತೆ, ವಾತ್ಸಲ್ಯ ಇತ್ಯಾದಿ ಇತ್ಯಾದಿಗಳ ಮೂಲ ದೇವತೆ ಆಕೆಯೇನೋ ಎಂಬಂತೆ. ಬದುಕು ಬದಲಾಗುತ್ತಲೇ ಇರುತ್ತದೆ ಎಂಬುದನ್ನು ತೀವ್ರವಾಗಿ ನಂಬಿದ್ದಾಳೆ. ಆದರೂ ಹಲವು ವರ್ಷಗಳಿಂದ ಒಂದೇ ರೀತಿಯ ಜೀವನಕ್ಕೆ ಒಗ್ಗಿಕೊಂಡಿದ್ದಾಳೆ. ಗಂಡನನ್ನು ಕಾಡಿದ್ದಾಳೆ, ಪೀಡಿಸಿದ್ದಾಳೆ. ಮಕ್ಕಳೊಂದಿಗೆ ಆಟವಾಡಿದ್ದಾಳೆ, ಪೋಷಕರ ಸಭೆಗೆ ಹಾಜರಾಗಿದ್ದಾಳೆ. ಹೀಗೆ…… ನಿತ್ಯವೂ ನೂತನ, ಗೊತ್ತು ಗುರಿಯಿಲ್ಲದ ಜೀವನದೊಡನೆ ಖುಷಿಯಾಗಿಯೇ ಒಪ್ಪಂದ ಮಾಡಿಕೊಂಡಿದ್ದಾಳೆ.
ಒಂದೇ ಒಂದು ಆತಂಕ: ಹೊಸತೊಂದು ಪ್ರಪಂಚದ ಬಗ್ಗೆ, ಆಕೆಗೆ ತಲುಪಲು ಹಿಡಿಯಲು ಸಾಧ್ಯವಾಗದ ಬದುಕಿನ ಬಗ್ಗೆ ಆಕೆಗೇನಾದರೂ ತಿಳಿದು ಹೋದರೆ? ಆಕೆಯ ಅಂತರಾಳದ ಭಾವನೆಗಳು ಸುಮ್ಮನಿದ್ದಾವೇನು? ಮತ್ತೆ ಗೆಜ್ಜೆ ಕಟ್ಟಿ ನರ್ತಿಸ ಹೊರಟಾವು. ನಿಧಾನವಾಗಿಯೇ ಆಕೆ ಕರಗಿ ಹೋದಾಳು.
             (ಇದೊಂದು ಪುಟ್ಟ ಪ್ರಪಂಚ, ಭಾವನೆಗಳದ್ದೇ ರಾಯಭಾರ, ಎಲ್ಲಾ ಪಾತ್ರಗಳನ್ನು ನಿರ್ವಹಿಸುವವರು ಅವರೇ. ನಿರ್ದೇಶನ, ನಿರ್ಮಾಣ, ಸಂಭಾಷಣೆ, ಕಥೆ ಎಲ್ಲವೂ ಅವುಗಳದ್ದೇ).

-ಪ್ರಗಲ್ಭಾ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s