
ಹೌದು…..ಇದು ಬದಲಾದ ಜನರ ಅಭಿರುಚಿಯು ದೇಸೀ ಕಲೆಗಳ ಮೇಲೆ ಬೀರಿದ ಪರಿಣಾಮವನ್ನು ಚಿತ್ರಿಸಿ, ವಿಶ್ವದ ಅತಿ ಮನೋಜ್ಞ ಎನ್ನಬಹುದಾದ ಭಾರತೀಯ ಸಾಂಸ್ಕೃತಿಕ ವೈಭವದ ಘಮಲನ್ನು ಪಸರಿಸುವ ಹೊಣೆ ಹೊತ್ತ ಲೇಖನ…
ಆಗಷ್ಟೇ ಭರತನಾಟ್ಯ ಕಾರ್ಯಕ್ರಮ ಮುಗಿಸಿ ವೇದಿಕೆ ಹಿಂಭಾಗದ ಡ್ರೆಸ್ಸಿಂಗ್ ರೂಮ್ ಪಕ್ಕದಲ್ಲಿ ಏಕಾಂತಚಿತ್ತಳಾಗಿ ಕುಳಿತಿದ್ದ ಸಹನಾಳ ದುಗುಡ ಮೊಗದಲ್ಲಿ ಅದೇನೋ ಕಳೆದುಕೊಂಡ ನಿರಾಶಾಭಾವವಿತ್ತು. ಭರತನಾಟ್ಯದ ಸಿಂಗಾರಗೊಂಡ ಆ ವೇಷಭೂಷಣವನ್ನು ಇನ್ನೂ ಬದಲಾಯಿಸದೆ ಒಂದೆಡೆ ಕುಳಿತಿದ್ದ ಅವಳ ರೀತಿಯು ಕಾರ್ಯಕ್ರಮ ನಿರೂಪಕನಾಗಿದ್ದ ನನ್ನನ್ನು ಪ್ರಶ್ನಿಸಿತು. ಇಲ್ಲಿ ಈಕೆ ವೇದಿಕೆ ಪ್ರವೇಶಿಸುವ ಮುನ್ನ ತನ್ನ ಗೆಳತಿ ಮೇಘನಾಳ ಸಿನೆಮಾ ಹಾಡಿನ ನೃತ್ಯ ವೀಕ್ಷಿಸಲು ಬಹಳವಾಗಿ ಸೇರಿದ್ದ ಜನ, ಭರತನಾಟ್ಯ ಶುರುವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದರು. ವರ್ಷಗಟ್ಟಲೆ ತರಬೇತಿ ಪಡೆದ ಈ ಶಾಸ್ತ್ರೀಯ ಹಿನ್ನೆಲೆಯುಳ್ಳ ಭರತನಾಟ್ಯಕ್ಕೆ ಸಿಗದ ಜನಮನ್ನಣೆ ಯಾವುದೇ ನೃತ್ಯ ಪ್ರಕಾರದ ಅರಿವಿಲ್ಲದೆಯೇ ಮಾಡುವ ಒಂದು ಸರಳ ನೃತ್ಯಕ್ಕೆ ಸಿಗುತ್ತಿದೆ ಎಂದಾದರೆ “ಯಾಕಿವೆಲ್ಲಾ?” ಎಂಬ ಕಠಿನ ಮರುಪ್ರಶ್ನೆಯು ಅವಳದಾಗಿತ್ತು.
ಅಂದು ಬೆಳಿಗ್ಗೆ ಬೆಂಗಳೂರಿನ ಟ್ರಾಫಿಕ್ ಮಧ್ಯೆ ಸಿಲುಕಿದ್ದ ನನಗೆ ಬೈಕನ್ನು ಮೆಟ್ರೋ ನಿಲ್ದಾಣದ ಬಳಿ ನಿಲ್ಲಿಸಿ ಮೆಟ್ರೋ ರೈಲು ಹತ್ತಿದರೆ ಆಫೀಸಿಗೆ ಬೇಗ ತಲುಪಬಹುದೆನ್ನುವ ಯೋಚನೆಯೊಂದು ಬಂದಿದ್ದರಿಂದ ನೇರವಾಗಿ ಮೆಟ್ರೋ ನಿಲ್ದಾಣ ಸೇರಿದೆ. ಒಳಪ್ರವೇಶಿಸುತ್ತಿದ್ದಂತೆ ನಿಲ್ದಾಣದೊಳಗೆ ಎಲ್ಲೆಡೆ ಕೇಳಿಬರುತ್ತಿದ್ದ ಕೊಳಲಿನ ನಾದವು ಟ್ರಾಫಿಕಲ್ಲಿ ಬೆಂದಿದ್ದ ನನ್ನ ಮನಸ್ಸನ್ನು ತುಸು ಉಲ್ಲಾಸಗೊಳಿಸಿತು. ಶಾಸ್ತ್ರೀಯ ಸಂಗೀತಕ್ಕೆ ನುಡಿಸಲಾಗಿದ್ದ ಆ ಕೊಳಲಿನ ಸ್ವರಗಳ ಜೊತೆ ಬೆರೆತಿದ್ದ ನನಗೆ ಪಕ್ಕದಲ್ಲಿ ಯಾರೋ “ಏನಪ್ಪಾ ಇದು, ಯಾವಾಗ್ ನೋಡಿದ್ರು ಈ ತಲೆನೋವು ಬರಿಸೋ ವಾದ್ಯನೇ ಬಡ್ಕೊತ ಇರ್ತದೆ, ಯಾವ್ದಾದ್ರು ಮೂವಿ ಸಾಂಗ್ ಇಲ್ಲಾ ರೇಡಿಯೋನ ಹಾಕ್ಬಾರ್ದ ಇವ್ರಿಗೆ..” ಅಂದ ಮಾತು ಅದೇಕೋ ಬೇಸರ ತರಿಸಿತು. ನಮ್ಮ ದೇಶದ ಸ್ವಾಭಿಮಾನದ ಪ್ರತೀಕವಾದ ಶಾಸ್ತ್ರೀಯ ಕಲೆಗಳಿಗೆ ಸಿಗುತ್ತಿರುವ ಬೆಲೆಯನ್ನು ನನ್ನೊಳಗೆ ಪ್ರಶ್ನಿಸಿದ ಈ ವೇಳೆಯು ಸಹನಾಳ ಆ ಸನ್ನಿವೇಶವನ್ನು ನೆನಪಿಸಿತು.
ನಮ್ಮ ಅಭಿರುಚಿಯೇ ಅಂತಹದ್ದು. ಮನೆಯಲ್ಲಿ ಅಮ್ಮ ಮಾಡಿದ ಆರೋಗ್ಯಕರ ಅಡುಗೆಗಿಂತ ರಸ್ತೆಬದಿಯಲ್ಲಿ ವ್ಯಾವಹಾರಿಕ ದೃಷ್ಟಿಯಿಂದ ಮಾಡಿದ ಮಸಾಲಭರಿತ ತಿನಿಸುಗಳೇ ಹೆಚ್ಚಾಗಿ ನಮ್ಮನ್ನು ಆಕರ್ಷಿಸುತ್ತದೆ. ಹಾಗಿರುವಾಗ ಭಾರತಾಂಬೆಯ ಮಡಿಲಲ್ಲಿ ಬೆಳೆದ ದೇಸೀ ಸೊಗಡಿನ ಲಲಿತಕಲೆಗಳು ನಮ್ಮನ್ನು ಆಕರ್ಷಿಸದೆ ಪಾಶ್ಚಾತ್ಯ ಕಲೆಗಳು ಸೆಳೆಯುವುದಲ್ಲಿ ಆಶ್ಚರ್ಯವೇನೂ ಕಾಡದು. ಅತ್ಯುತ್ತಮ ಸಾಹಿತ್ಯವಿರುವ ಇಂಪಾದ ಕನ್ನಡ ಭಾವಗೀತೆಯನ್ನು ಕೇಳಲು ಕಂಜೂಸ್ ಮಾಡುವ ನಮ್ಮ ಕಿವಿಗಳಿಗೆ ವಿಚಿತ್ರ ಸಾಹಿತ್ಯದ ಆಧುನಿಕ ಗೀತೆಗಳೆಂದರೆ ಬಲು ಪ್ರಿಯ. ಟಿವಿ ಮುಂದೆ ರಿಮೋಟ್ ಹಿಡಿದು ಕುಳಿತಾಗ ಇತ್ತೀಚಿನ ಕೆಲವೊಂದು ವಿಭಿನ್ನ “ರಿಯಾಲಿಟಿ ಶೋ”ಗಳು ಸತ್ವಹೀನವೆಂದೆನಿಸುವ ನಮಗೆ, ಕೊನೆಗೆ ಅದೇ ಕಾರ್ಯಕ್ರಮವನ್ನು ಋಣಾತ್ಮಕ ಮನೋಭಾವದಲ್ಲೇ ಚಾಚುತಪ್ಪದ ಹಾಗೆ “ಗ್ರ್ಯಾಂಡ್ ಫಿನಾಲೆ”ವರೆಗೂ ವೀಕ್ಷಿಸುವ ವಿಶಿಷ್ಟ ತಾಳ್ಮೆಯೊಂದಿದೆ..! ಇದೇ ಕಾರಣಕ್ಕಾಗಿಯೋ ಏನೋ, ಇಂದು ಶಾಸ್ತ್ರೀಯ ಹಾಗೂ ಜಾನಪದ ಪ್ರಕಾರಗಳ ಪ್ರದರ್ಶನವು ಕೇವಲ ಸರ್ಕಾರಿ ಸ್ವಾಮ್ಯದ ದೂರದರ್ಶನ ಹಾಗೂ ಅದರ ಇತರ ವಿಭಾಗಕ್ಕೆ ಮಾತ್ರ ಮೀಸಲಾಗಿರುವುದು..!
ಅದೊಂದು ಕಾಲವಿತ್ತು. ಮನೆಯೊಳಗೊಂದು ರೇಡಿಯೋ ಇದ್ದರಷ್ಟೇ ಸಾಕಿತ್ತು, ಕೇವಲ ಶೋತೃಗಳಾಗಿದ್ದುಕೊಂಡೇ ಮನರಂಜನೆಯನ್ನು ಭರಪೂರ ಅನುಭವಿಸುತ್ತಿದ್ದೆವು. ಅದು ಚಿತ್ರಗೀತೆಯಾಗಲಿ, ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆಯಾಗಲಿ, ವೀಣಾವಾದನವಾಗಲಿ ಅಥವಾ ಸಂಸ್ಕೃತ ವಾರ್ತೆಯೇ ಆಗಿರಲಿ.., ಎಲ್ಲವನ್ನೂ ಸಹನೆಯಿಂದ ಕೇಳುವ ವಿಶೇಷ ಪ್ರತಿಭೆಯೊಂದು ನಮ್ಮಲ್ಲಿತ್ತು. ಇನ್ನು ಟಿವಿ ಇದ್ದರಂತೂ ಕೇಳಬೇಕೆ, ಪಕ್ಕದ್ಮನೆಯವರೆಲ್ಲರೂ ಆಕಸ್ಮಿಕವಾಗಿ ನೆಂಟರಾಗುತ್ತಿದ್ದರು. ಬರುವ ಒಂದು ಡಿಡಿ ಚಾನೆಲ್ ನಲ್ಲಿ ಅದ್ಯಾವ ಕಾರ್ಯಕ್ರಮ ಬಂದರೂ ತೃಪ್ತಿ ಪಡುವ ಕಾಲವದು. ಊರಿನಲ್ಲಾಗುತ್ತಿದ್ದ ಯಕ್ಷಗಾನಕ್ಕೆ ಬೆಡ್ ಶೀಟ್ ಸಮೇತವಾಗಿ ಹೊರಟು ಮೈ ನಡುಗುವ ಚಳಿಯಲ್ಲೂ ರಾತ್ರಿಯಿಡೀ ಕಣ್ಣು ಮಿಟುಕಿಸದೆ ನೋಡಿದ ಬಾಲ್ಯದ ನೆನಪು ಕೂಡ ಒಂದೆಡೆ ಇದೆ. ದಸರಾ ಹಬ್ಬದ ನವರಾತ್ರಿಯ ದಿನಗಳಲ್ಲಿ ಮನೆಗೆ ಬರುತ್ತಿದ್ದ ಆ ಒಂದೊಂದು ವೇಷಗಳೂ ಸಹ ನಮ್ಮನ್ನು ಅತಿಯಾಗಿ ಮನರಂಜಿಸಿದ್ದನ್ನೂ ಮರೆಯಲಾಗದು. ಇದೀಗ ಕಾಲ ಬದಲಾಗಿದೆ. ಇದು ಕೇವಲ ಹತ್ತು ವರ್ಷಗಳ ಹಿಂದೆಯಷ್ಟೇ ಆರಂಭಗೊಂಡ ಅನಿರೀಕ್ಷಿತ ಬದಲಾವಣೆ. ಈ ಸಮಯದಲ್ಲಿ ಮನರಂಜನೆಗೆ ಲೆಕ್ಕವಿಲ್ಲದಷ್ಟು ಮಾಧ್ಯಮಗಳು ಸೃಷ್ಟಿಯಾಗಿವೆ. ಅದರಲ್ಲೂ ಇಂಟರ್ನೆಟ್ ಕ್ರಾಂತಿಯ ಪಾಲು ಮಹತ್ವದ್ದು. ಇದೀಗ ಕೈಯಲ್ಲಿನ ಸ್ಮಾರ್ಟ್ ಫೋನೇ ಪ್ರತಿಯೊಬ್ಬನ ಮನರಂಜನೆಯ ಮಾಧ್ಯಮವೆನ್ನುವ ನೈಜತೆಗೆ ಬಂದಿದ್ದೇವೆ.
ಅದಿರಲಿ.., ಮೊದಲನೆಯದಾಗಿ ಈ ದೇಸೀಕಲೆ ಹಾಗೂ ಶಾಸ್ತ್ರೀಯತೆಯ ವಿಚಾರಕ್ಕೆ ಬರೋಣ. ಭಾರತೀಯ ಸಂಗೀತ, ನೃತ್ಯ, ಶಿಲ್ಪ, ಚಿತ್ರ, ವಾಸ್ತು, ಸಾಹಿತ್ಯ ಹಾಗೂ ನಾಟಕಗಳನ್ನು ಒಟ್ಟಾಗಿ “ಲಲಿತ ಕಲೆ”ಗಳೆಂದು ಗುರುತಿಸಲಾಗಿದೆ. ಶಾಸ್ತ್ರೀಯ ಹಾಗೂ ಜಾನಪದ ಹಿನ್ನೆಲೆಯ ಈ ಲಲಿತಕಲೆಯು ಅಪ್ಪಟ ಭಾರತೀಯ ದೇಸೀ ಸೊಗಡಿನ ಸ್ವಂತಿಕೆಯ ಕಲೆಯಾದ್ದರಿಂದ ಇವುಗಳನ್ನು “ದೇಸೀಕಲೆ” ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತ ದೇಶದಲ್ಲಿ ಈ ಲಲಿತಕಲೆಯೂ ಕೂಡ ಪ್ರಾಂತ್ಯಕ್ಕನುಸಾರವಾಗಿ ವಿಭಿನ್ನತೆಯನ್ನು ಹೊಂದಿದೆ. ನೃತ್ಯ ಪ್ರಕಾರಕ್ಕೆ ಬಂದರೆ ಉತ್ತರ ಭಾರತದ ಕಥಕ್, ಕರ್ನಾಟಕ ಹಾಗೂ ತಮಿಳುನಾಡಿನ ಭರತನಾಟ್ಯಂ, ಕೇರಳದ ಕಥಕ್ಕಳಿ, ಆಂಧ್ರಪ್ರದೇಶದ ಕೂಚಿಪುಡಿ, ಓರಿಸ್ಸಾದ ಓಡಿಸ್ಸಿ, ಅಸ್ಸಾಂನ ಸತ್ರಿಯ, ಮಣಿಪುರದ ಮಣಿಪುರಿ, ಪಶ್ಚಿಮ ಬಂಗಾಳದ ಗೌಂಡಿಯ ನೃತ್ಯ ಹೀಗೆ ವಿಭಾಗಗೊಂಡಿದೆ. ನಾಟಕ ಹಾಗೂ ನೃತ್ಯ ರೂಪವನ್ನೆರಡನ್ನೂ ಒಳಗೊಂಡ ಕರಾವಳಿಯ ಯಕ್ಷಗಾನ ಕೂಡ ಲಲಿತ ಕಲೆಯ ಒಂದು ಭಾಗವೇ. ಇನ್ನು ಸಪ್ತಸ್ವರಗಳಿಂದ ಕೂಡಿದ ಶಾಸ್ತ್ರೀಯ ಸಂಗೀತಕ್ಕೆ ಬಂದರೆ ಹಿಂದೂಸ್ತಾನಿ ಹಾಗೂ ಕರ್ನಾಟಿಕ್ ಎಂಬ ಪ್ರಮುಖ ವಿಭಾಗವಿದೆ. ಈ ಶಾಸ್ತ್ರೀಯ ಸಂಗೀತವನ್ನು ಮೂಲವಾಗಿಸಿ ನುಡಿಸಲಾಗುವ ಕೊಳಲು, ಸಿತಾರ್, ವೀಣೆ, ಸರೋದ್, ಶಹನಾಯಿ, ಸಂತೂರ್, ಸಾರಂಗಿ ವಯೋಲಿನ್, ತಬಲ, ಮೃದಂಗ, ಹಾರ್ಮೋನಿಯಂಗಳೆಂಬ ವಾದ್ಯಗಳಿವೆ. ಇದಲ್ಲದೇ ಹಳ್ಳಿಗಾಡಿನ ಸೊಗಡಿನ ಅವೆಷ್ಟೋ ಜಾನಪದ ಪ್ರಕಾರಗಳಿವೆ. ಇದು ಇಡೀ ವಿಶ್ವದಾದ್ಯಂತ ಎಲ್ಲೂ ಕಾಣಸಿಗದ ಮನೋಜ್ಞ ಎನಬಹುದಾದ ಸಾಂಸ್ಕೃತಿಕ ವೈಭವವೇ ಸರಿ. ಇದು ಭಾರತೀಯರಾದ ನಮಗೆ ಹೆಮ್ಮೆಯಲ್ಲವೇ?
ಯೂಟ್ಯೂಬ್ ನಲ್ಲಿ ಬೆಲ್ಲಿ ಡ್ಯಾನ್ಸ್ ನೋಡಿ ಆನಂದಪಡುವುದರಲ್ಲೇನೂ ತಪ್ಪಿಲ್ಲ, ಅದರೊಂದಿಗೆ ಒಂದು ಸಿದ್ದಾಂತವಿರುವ ಭಾರತೀಯ ನೃತ್ಯ ಕಲೆಯನ್ನು ಕೇವಲವೆಂಬಂತೆ ಪರಿಗಣಿಸಿ ಅಗೌರವ ತೋರುವುದರಲ್ಲಿ ತಪ್ಪಿದೆ. ಪಾಪ್ ಸಂಗೀತವನ್ನು ಅತಿಯಾಗಿ ಅನುಭವಿಸುವುದರಲ್ಲೇನೂ ತಪ್ಪಿಲ್ಲ, ಭಾರತೀಯ ಸಂಗೀತದ ಸಾಹಿತ್ಯವನ್ನು ಹಾಗೂ ಅದರೊಳಗಿನ ಹೃದಯ ಅರಳಿಸಬಲ್ಲ ಸ್ವರವನ್ನು ಗಮನಿಸದೇ ಇದ್ದುದರಲ್ಲಿ ತಪ್ಪಿದೆ. ಯಾವುದೇ ಶಾಸ್ತ್ರೀಯ ಕಲೆಯ ವಿದ್ಯೆಯನ್ನು ಮೈಗೂಡಿಸಿಕೊಳ್ಳಲು ಅದೆಷ್ಟೋ ವರ್ಷಗಳ ಪರಿಶ್ರಮ ಬೇಕಾಗುತ್ತದೆ ಎಂಬುದನ್ನು ಮನಗಾಣಬೇಕಿದೆ. ತನ್ನ ಅವಿರತ ಪರಿಶ್ರಮ ಮುಖೇನ ಶಾಸ್ತ್ರೀಯ ಪ್ರಕಾರಗಳನ್ನು ಕಲಿತ ಅದೆಷ್ಟೋ ಪ್ರತಿಭೆಗಳಿಗೆ ಇಂದು ವೇದಿಕೆಯೇ ಸಿಗದಾಗಿದೆ. ತಂತ್ರಜ್ಞಾನದ ಪ್ರಗತಿಯಿಂದಾದ ಅತಿಯಾದ ಮನರಂಜನ ಮಾಧ್ಯಮದಲ್ಲಿ ಬೆರೆತಾಗ ಹಳೆಯದೆಲ್ಲವೂ ಉಡಾಫೆಯ ವಸ್ತುವಾಗಬಾರದು. ಇದೀಗ ಯುವಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಲಲಿತಕಲೆಯೊಳಗೆ ಕೆಲವೊಂದು ಆಧುನಿಕ ಮಾರ್ಪಾಡುಗಳು ಸುಳಿದು ಅದು ತನ್ನ ಶಾಸ್ತ್ರೀಯತೆಯೆಂಬ ನೈಜತೆಯನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.
ವಿದ್ಯೆ ನಮ್ಮನ್ನು ಬಾಹ್ಯವಾಗಿ ರೂಪಿಸಿ ಬದುಕನ್ನು ನೀಡುತ್ತದೆ. ಕಲೆ ನಮ್ಮ ಅಂತಃರಂಗವನ್ನು ಪ್ರಚೋದಿಸಿ ಹೃದಯವನ್ನು ಅರಳಿಸುತ್ತದೆ. ಬಾಲ್ಯದಲ್ಲಿ ಲಲಿತಕಲೆಯನ್ನು ಅಭ್ಯಾಸ ಮಾಡುವುದರಿಂದ ಮಾನಸಿಕ ಸ್ಥೈರ್ಯ ಹೆಚ್ಚುವುದರ ಜೊತೆಗೆ ಮನಸ್ಸಿಗೆ ನೆಮ್ಮದಿಯೂ ಸಿಗಲಿದೆ, ಅಲ್ಲದೇ ಬುದ್ದಿಯ ಬೆಳವಣಿಗೆಗೂ ಸಹಕಾರಿಯಾಗುವುದೆಂದು ಮನೋಶಾಸ್ತ್ರವೇ ಹೇಳುತ್ತದೆ. ಶಾಲಾ ಕಾಲೇಜು ಹಂತದಲ್ಲಿ ಐಚ್ಛಿಕ ಪಠ್ಯದೊಂದಿಗೆ ಲಲಿತಕಲೆಗಳ ವಿಷಯಗಳನ್ನೂ ಅಭ್ಯಸಿಸಿದಾಗ ದೇಶೀಯ ಕಲೆಗಳು ಪ್ರತಿಯೊಬ್ಬರ ಮನದಲ್ಲಿಯೂ ಬೇರೂರಲು ಸಾಧ್ಯವಾಗುತ್ತದೆ. ಇಲ್ಲಿ ನೃತ್ಯವು ಸರಳ ಯೋಗಾಭ್ಯಾಸವೂ ಹೌದು, ಶಾಸ್ತ್ರೀಯತೆಯ ಅಂಶಗಳನ್ನೊಳಗೊಂಡ ಕ್ರೀಡೆಯೂ ಹೌದು. ಈ ಶಾಸ್ತ್ರೀಯ ನೃತ್ಯಾಭ್ಯಾಸದಲ್ಲಿ ಸತತವಾಗಿ ದೈಹಿಕ ಚಟುವಟಿಕೆ ಇರುವುದರಿಂದ ಮನರಂಜನೆಯೊಂದಿಗೆ ಕಲಿಕೆಯೂ ಆಗುವುದಲ್ಲದೆ ದೈಹಿಕ ಬೆಳವಣಿಗೆ ಅತ್ಯಂತ ಆಕರ್ಷಕವಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ.
ಭಾರತವು ವಿಶ್ವಮಾನ್ಯತೆಯನ್ನು ಪಡೆಯುವಲ್ಲಿ ಇಲ್ಲಿಯ ಕಲೆಗಳ ಪ್ರಭಾವವು ಬಹಳಷ್ಟಿದೆ ಎಂಬುದನ್ನು ಅರಿಯಬೇಕಿದೆ. ಇದೀಗ ಬದಲಾಗುತ್ತಿರುವ ಮಾನವನ ಅಭಿರುಚಿಯು ಭಾರತೀಯ ಕಲಾ ಪ್ರಕಾರದ ಸಂಪತ್ತಿಗೊಂದು ಸವಾಲಾಗಿದೆ. ಇಂತಹ ಸ್ಥಿತ್ಯಂತರದ ಮಧ್ಯೆಯೂ ಲಲಿತಕಲೆಯನ್ನು ಉತ್ತೇಜಿಸಿ, ಪ್ರತಿವರ್ಷವೂ ಅದಕ್ಕೊಂದು ಅಚ್ಚುಕಟ್ಟಾದ ವೈಭವಯುತ ವೇದಿಕೆಯನ್ನು ಕಲ್ಪಿಸುತ್ತಿರುವ “ಆಳ್ವಾಸ್ ವಿರಾಸತ್”ನಂತಹ ಕಾರ್ಯಕ್ರಮವನ್ನು ಇಲ್ಲಿ ಸ್ಮರಿಸಲೇಬೇಕಿದೆ. ನಮ್ಮಲ್ಲಿನ ಯಾವುದೇ ಮಾಧ್ಯಮಗಳು ವ್ಯಾವಹಾರಿಕವಾಗಿ ಕಾರ್ಯ ನಿರ್ವಹಿಸುವುದರಿಂದ ಇಲ್ಲಿ “ಟಿ.ಆರ್.ಪಿ”ಯೇ ಪ್ರಮುಖವಾಗುತ್ತದೆ. ಆದರೆ ಆ “ಟಿ.ಆರ್.ಪಿ”ಯ ಸೃಷ್ಟಿಕರ್ತರೇ ನಾವೆಂದು ಮರೆಯುವ ಹಾಗಿಲ್ಲ. ಹೀಗಿರುವಾಗ ಇಲ್ಲಿ ಮಾಧ್ಯಮವನ್ನು ದೂಷಿಸಲು ಸಾಧ್ಯವಾಗದು. ಪ್ರಸ್ತುತ, ಈ ಭಾರತೀಯ ಭವ್ಯ ಕಲಾ ಪರಂಪರೆಯನ್ನು ಪ್ರಚುರಗೊಳಿಸುವ ಹಾಗೂ ಬಲಪಡಿಸುವ ಸಾಮರ್ಥ್ಯ ಸಾಮಾಜಿಕ ಜಾಲತಾಣಕ್ಕಿದೆ. ದೇಸೀಕಲೆಯನ್ನು ಆಸಕ್ತಿ ಪಡುವ ಹಾಗೂ ಗೌರವಿಸುವ ಮೂಲಕ ಭಾರತಾಂಬೆಯ ಅನರ್ಘ್ಯ ಸಂಪತ್ತನ್ನು ಉಳಿಸಿ ಬೆಳೆಸೋಣ. ಕೊನೆಯದಾಗಿ.., ಬದಲಾವಣೆ ನಮ್ಮ ಮನದಲ್ಲಿದೆ..!
– ಚಿದಾನಂದ್ ಎನ್ ಕೋಟ್ಯಾನ್
Nice one. Very true
LikeLike
Thank you mam . . .
LikeLike
Good one……….
LikeLike
ಉತ್ತಮ ಲೇಖನ,
ಅಂದು ಹಿತ್ತಲ ಗಿಡ ಮದ್ದಲ್ಲ ಅಂದುಕೊಂಡಿದ್ದರೆ ಇಂದು ಹಿತ್ತಲ ಗಿಡಗಳೆಲ್ಲಾ ತ್ಯಾಜ್ಯವಾಗಿ ಪರಿಣಮಿಸಿದೆ..
LikeLiked by 1 person
Good one….
LikeLiked by 1 person